ಗ್ರಾಮೀಣ ಸೊಗಡಿನ “ನಾಡಪೆದ ಆಶಾ” : ಭರದಿಂದ ಸಾಗಿದೆ ಚಿತ್ರೀಕರಣ

February 17, 2021

ಮಡಿಕೇರಿ ಫೆ.17 : ಗ್ರಾಮೀಣ ಸೊಗಡಿನ, ಮಹಿಳಾ ಪ್ರಧಾನ “ನಾಡಪೆದ ಆಶಾ” ಕೊಡವ ಚಲನಚಿತ್ರದ ಚಿತ್ರೀಕರಣ ಕೊಡಗಿನ ವಿವಿಧೆಡೆ ಭರದಿಂದ ಸಾಗಿದೆ.
ಬೇತ್ರಿ ಸಮೀಪದ ಮುಕ್ಕಾಟಿರ ಐನ್‍ಮನೆಯಲ್ಲಿ ಇಂದು ಹಲವು ದೃಶ್ಯಗಳನ್ನು ಚಿತ್ರೀಕರಿಸಲಾಯಿತು. ಖ್ಯಾತ ನಿರ್ದೇಶಕ ಎ.ಟಿ.ರಘು ಅವರ ನಿರ್ದೇಶನದ “ಗೆಜ್ಜೆತಂಡ್” ಧಾರಾವಾಹಿಯ ಮೂಲಕ ಇದೇ ಐನ್‍ಮನೆಯಿಂದ ಅಭಿನಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ನಾನು ಚಿತ್ರ ನಿರ್ದೇಶಕನಾಗಿ ಈ ಸುಂದರ ಪರಿಸರದ ಮನೆಯಲ್ಲಿ ಚಿತ್ರೀಕರಣದಲ್ಲಿ ತೊಡಗಿರುವುದು ಹೆಮ್ಮೆ ಎನಿಸಿದೆ ಎಂದು “ನಾಡಪೆದ ಆಶಾ” ದ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಇದೇ ಸಂದರ್ಭ ಹರ್ಷ ವ್ಯಕ್ತಪಡಿಸಿದರು.
ಸುಮಾರು 12 ದಿನಗಳ ಕಾಲ ಜಿಲ್ಲೆಯ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಅತ್ಯಂತ ಭಾವನಾತ್ಮಕ ಸನ್ನಿವೇಶಗಳು ಚಿತ್ರದಲ್ಲಿರುತ್ತದೆ ಎಂದರು. ಅಂಗನವಾಡಿ ಕಾರ್ಯಕರ್ತೆಯ ಸಂಕಷ್ಟದ ಬದುಕಿನ ಮೇಲೆ ಬೆಳಕು ಚೆಲ್ಲಿರುವ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ಬರೆದಿರುವ ಕಾದಾಂಬರಿ ಆಧಾರಿ ಚಿತ್ರ ಇದಾಗಿದ್ದು, ಗೆಲುವು ನಿಶ್ಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಐನ್‍ಮನೆಯಲ್ಲಿ ನಡೆದ ಚಿತ್ರೀಕರಣದಲ್ಲಿ ನಾಯಕ ನಟ ಬೊಳ್ಳಜಿರ ಬಿ.ಅಯ್ಯಪ್ಪ, ಪ್ರಧಾನ ಪಾತ್ರಧಾರಿ ಅಡ್ಡಂಡ ಅನಿತಾ ಕಾರ್ಯಪ್ಪ, ಕಲಾವಿದರುಗಳಾದ ವಾಂಚಿರ ವಿಠಲ್ ನಾಣಯ್ಯ, ಸುಜಲ ನಾಣಯ್ಯ, ನೆಲ್ಲಚಂಡ ರಿಷಿ ಪೂವಮ್ಮ, ಕೊಟ್ಟುಕತ್ತಿರ ಆರ್ಯ ದೇವಯ್ಯ, ಅಚ್ಚಪಂಡ ಸುಚಿತಾ, ಪ್ರಭಾ ನಾಣಯ್ಯ ಮತ್ತಿತರರು ಪಾಲ್ಗೊಂಡಿದ್ದರು.
ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಉತ್ತಯ್ಯ ಹಾಗೂ ಈರಮಂಡ ಪೊನ್ನಮ್ಮ ಉತ್ತಯ್ಯ ಅವರು ತಮ್ಮ ಸಂಸ್ಥೆ ಮೂಲಕ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

error: Content is protected !!