ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ : ಮಡಿಕೇರಿಯಲ್ಲಿ ಅಹಿಂದ ಪ್ರತಿಭಟನೆ

February 18, 2021

ಮಡಿಕೇರಿ ಫೆ.18 : ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಗಣತಿಯ ವರದಿಯನ್ನು ರಾಜ್ಯ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಅಹಿಂದ ಒಕ್ಕೂಟದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದೆ. ಕಳೆದ ಒಂದು ವರ್ಷದಲ್ಲಿ ಡೀಸೆಲ್ ಬೆಲೆ ಶೇ.23 ಮತ್ತು ಪೆಟ್ರೋಲ್ ಬೆಲೆ ಶೇ.25 ರಷ್ಟು ಏರಿಕೆಯಾಗಿದೆ. ಆದಾಯ ಕಡಿಮೆಯಾಗಿ ಖರ್ಚು ಹೆಚ್ಚಾಗುತ್ತಿದ್ದು, ಜನರ ಆರ್ಥಿಕ ಮಟ್ಟ ಚೇತರಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ತೈಲೋತ್ಪನ್ನಗಳಿಗೆ ಒಂದು ವರ್ಷದ ಹಿಂದಿನ ದರವನ್ನು ನಿಗಧಿ ಪಡಿಸಿದರೆ ಪರಿಸ್ಥಿತಿ ಸುಧಾರಿಸಬಹುದೆಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದು, ಸರ್ಕಾರ ಇದನ್ನು ಪರಿಗಣಿಸಬೇಕೆಂದು ಒತ್ತಾಯಿಸಿದರು.
ಗಣತಿಯ ವರದಿಯನ್ನು ಬಿಡುಗಡೆ ಮಾಡದಿದ್ದರೆ ವಿವಿಧ ಜನಾಂಗಗಳ ಸ್ಥಿತಿಗತಿ ಹೇಗಿದೆ ಎನ್ನುವುದು ತಿಳಿಯುವುದಿಲ್ಲವೆಂದು ಅಭಿಪ್ರಾಯಪಟ್ಟರು. ಶಾಶ್ವತ ಆಯೋಗದ ವರದಿ ತಯಾರಿಸಲು 158 ಕೋಟಿ ರೂ.ಗಳಷ್ಟು ಖರ್ಚು ಮಾಡಲಾಗಿದೆ. ಸುಮಾರು 1351 ಜನಾಂಗಗಳನ್ನು ಗುರುತು ಮಾಡಲಾಗಿದ್ದು, ಹೆಚ್ಚುವರಿಯಾಗಿ 464 ಜಾತಿಗಳು ಸೇರ್ಪಡೆಗೊಂಡಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದೆಲ್ಲವೂ ಸಮಗ್ರವಾಗಿ ಬಹಿರಂಗವಾದರಷ್ಟೇ ಎಲ್ಲಾ ಜನಾಂಗಗಳಿಗೆ ನ್ಯಾಯ ಸಿಗಲು ಸಾಧ್ಯ, ಆದರೆ ಸರ್ಕಾರದಿಂದ ಇಲ್ಲಿಯವರೆಗೆ ವರದಿಯನ್ನು ಬಿಡುಗಡೆ ಮಾಡಲು ಸಾಧ್ಯವೇ ಆಗಿಲ್ಲವೆಂದು ರಮೇಶ್ ಟೀಕಿಸಿದರು.
ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಒಕ್ಕೂಟದ ಅಧ್ಯಕ್ಷ ಟಿ.ಎಂ.ಮುದ್ದಯ್ಯ, ಕಾರ್ಯಾಧ್ಯಕ್ಷ ಬೇಬಿಮ್ಯಾಥ್ಯು, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ನಿರ್ದೇಶಕ ಆರ್.ಪಿ.ಚಂದ್ರಶೇಖರ್ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

error: Content is protected !!