ಸಾಹಿತ್ಯ ಪರಿಷತ್ ಚುನಾವಣೆ : ಮತ ನೀಡಲು ಸಂಗಮೇಶ ಮನವಿ

February 18, 2021

ಮಡಿಕೇರಿ ಫೆ.18 : ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಕಲೆಗಳ ರಕ್ಷಣೆಗಾಗಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವದ ಮುನ್ನುಡಿ ಬರೆಸಿಕೊಂಡಿದ್ದು, ಈ ಬಾರಿ ನಡೆಯುವ ಪರಿಷತ್ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ಕೂಡ ಸ್ಪರ್ಧಿಸುತ್ತಿರುವುದಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್ ನ್ನು ಕಟ್ಟಿ ಬೆಳೆಸುವ ಹೊಸ ಆಯಾಮಗಳ ಆಲೋಚನೆಯೊಂದಿಗೆ ಅನೇಕ ಕ್ರಿಯಾ ಯೋಜನೆಗಳನ್ನು ರೂಪಿಸಿಕೊಂಡಿದ್ದು, ಅವುಗಳ ಅನುಷ್ಠಾನವು ನನ್ನ ಏಕೈಕ ಗುರಿಯಾಗಿದೆ ಎಂದರು.
ಬಹುಪಾಲು ಸದಸ್ಯರಲ್ಲಿ ಕನ್ನಡ ಸಾಹಿತ್ಯದ ಅಸ್ಮಿತೆಯನ್ನು ಕಾಯ್ದುಕೊಳ್ಳಲು ಮತ್ತು ಪರಿಷತ್‍ನ ಗೌರವ ಕಾಪಾಡಲು ಬದ್ಧನಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಮಾಹಿತಿ ತಿಳಿಸಿದರು.
ಸ್ಪರ್ಧಾಳುಗಳಲ್ಲಿ ನಾನು ಏಕೈಕ ಸಾಹಿತಿಯಾಗಿದ್ದು, ಹದಿನಾರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದೇನೆ. ಅಲ್ಲದೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‍ನ ಎರಡು ಅವಧಿಗೆ ಗೌರವ ಕಾರ್ಯದರ್ಶಿಯಾಗಿ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಿದ್ದೇನೆ. ಐದು ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳನ್ನು ಹಾಗೂ ಅನೇಕ ವಿಚಾರ ಸಂಕಿರಣ, ಕಮ್ಮಟ, ಸಮಾವೇಶ, ಗೋಷ್ಠಿಗಳನ್ನು ಆಯೋಜನೆ ಮಾಡಿದ್ದು, ಪೂರ್ಣ ಪ್ರಮಾಣದ ಸಾಹಿತಿಗಳ ಒಡನಾಟ ಹೊಂದಿದ್ದೇನೆ ಎಂದು ಗಮನ ಸೆಳೆದರು.
ಸಾಹಿತಿಗಳ, ಸಂಘಟಕರ, ಚಿಂತಕರ ಸಭೆ ಕರೆದು ಅವರ ಮಾರ್ಗದರ್ಶನದ ಮೂಲಕ ಕ್ರೀಯಾಯೋಜನೆಗಳನ್ನು ಸಿದ್ಧಪಡಿಸಿ ಅನುಷ್ಠಾನಕ್ಕೆ ತರಲಾಗುವುದು, ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿಯ ಚಟುವಟಿಕೆಗಳನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸುವ ಆಲೋಚನೆ ಹೊಂದಿದ್ದು, ಪುಸ್ತಕ ಸಂತೆ, ಕಲಾಸಂತೆ, ಚಿತ್ರಸಂತೆಗಳ ಮೂಲಕ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕಲಿಕಾ ಕೇಂದ್ರಗಳನ್ನು ಆರಂಭಿಸುವುದು ಸೇರಿದಂತೆ ಕನ್ನಡದ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ ಸಂಗಮೇಶ ಕೊಡಗಿನಲ್ಲಿರುವ ಪರಿಷತ್‍ನ 2000ಕ್ಕೂ ಅಧಿಕ ಮತದಾರರು ತಮಗೆ ಮತ ನೀಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶರಣಬಸಪ್ಪ ಹಾಗೂ ಕೆ.ಕರಿಯಪ್ಪ ಉಪಸ್ಥಿತರಿದ್ದರು.

error: Content is protected !!