ಕೊಡಗಿನ ಕಲಾವಿದರ ‘ಮಡಿಕೆಬೀಡು’ ಕಿರುಚಿತ್ರ ಶೀಘ್ರ ಬಿಡುಗಡೆ

February 18, 2021

ಮಡಿಕೇರಿ ಫೆ.18 : ಮೂರ್ನಾಡಿನ ಗುಬ್ಬಿ ಕ್ರಿಯೇಷನ್ ಮತ್ತು ಶ್ರೀಅಮ್ಮಾ ಡಯೋಗ್ನೆಸ್ಟಿಕ್ ಸೆಂಟರ್ ನಿರ್ಮಿಸಿರುವ ‘ಮಡಿಕೆಬೀಡು’ ಕಿರುಚಿತ್ರ ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಎಂ.ಎಸ್.ವಿನಯ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೆಬೀಡು ಕಿರುಚಿತ್ರವನ್ನು ‘ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ’ ವಿಷಯವನ್ನು ಆಧರಿಸಿ ಚಿತ್ರಿಸಲಾಗಿದೆ. ಮುಖ್ಯ ಪಾತ್ರದಲ್ಲಿ ಕೊಡಗಿನ ರಂಗಭೂಮಿ ಕಲಾವಿದ ಮಾದೇಟಿರ ಬೆಳ್ಯಪ್ಪ, ಚಿತ್ರಾಸುಜನ್ ಮತ್ತಿತರರು ಅಭಿನಯಿಸಿದ್ದಾರೆ.
ಇದೇ ಫೆ.16 ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
::: ಕಿರುಚಿತ್ರ ಸ್ಪರ್ಧೆ :::
ಗುಬ್ಬಿ ಕ್ರಿಯೇಷನ್ಸ್‍ನ ವತಿಯಿಂದ ವಿನೂತನ ಪ್ರಯತ್ನವಾಗಿ ಕೊಡಗಿನ ಯುವ ಪ್ರತಿಭೆಗಳಿಗೆ ಕಿರುಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು 5 ಜನರ ಒಂದು ತಂಡವನ್ನು ರಚಿಸಿ, ‘ಮೇಕ್ ಇನ್ ಇಂಡಿಯಾ’ ವಿಷಯದ ಕುರಿತು ಕಿರುಚಿತ್ರ ರಚಿಸಬಹುದು. ಕಿರುಚಿತ್ರ 10 ನಿಮಿಷದ ಒಳಗಿರಬೇಕು. ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರಿಸಲಾದ ಕಿರುಚಿತ್ರಗಳಿಗೂ ಸ್ಪರ್ಧೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಸ್ಪರ್ಧಾ ವಿಜೇತ ತಂಡಕ್ಕೆ 5 ಸಾವಿರ ನಗದು, ದ್ವೀತಿಯ ಬಹುಮಾನ 2,500ರೂ., ತೃತೀಯ ಬಹುಮಾನ 1500ರೂ.ಗಳನ್ನು ನೀಡಲಾಗುವುದು. ಆಸಕ್ತರು ಫೆ. 25ರ ಒಳಗೆ ವಾಟ್ಸ್ ಆ್ಯಪ್ ಮೂಲಕ 9972643059 ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.
ಕಲಾವಿದ ಮಾದೇಟಿರ ಬೆಳ್ಯಪ್ಪ ಮಾತನಾಡಿ, ವಿನಯ್ ಕುಮಾರ್‍ರÀ ಶ್ರದ್ಧೆ, ಆಸಕ್ತಿ ಹಾಗೂ ಕಿರುಚಿತ್ರದ ಕಥಾವಸ್ತು ಮೆಚ್ಚುಗೆಯಾಗಿ ಈ ಚಿತ್ರದಲ್ಲಿ ನಟಿಸಿದ್ದೇನೆ. ಕಿರುಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕಲಾವಿದೆ ಚಿತ್ರಾ ಸುಜನ್ ಮಾತನಾಡಿ, “ಮಡಿಕೆಬೀಡು” ಸಾಮಾಜಿಕ ಕಳಕಳಿಯುಳ್ಳ ಕಿರುಚಿತ್ರವಾಗಿದ್ದು, ಮೊದಲ ಬಾರಿಗೆ ನಟಿಸಿದ್ದೇನೆ. ಹಿರಿಯ ಕಲಾವಿದರಾದ ಮಾದೇಟಿರ ಬೆಳ್ಯಪ್ಪ, ನಿರ್ದೇಶಕ ವಿನಯ್ ಹಾಗೂ ಯುವ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಛಾಯಾಗ್ರಾಹಕ ಎಸ್.ಎಸ್.ಕೌಶಿಕ್ ಹಾಗೂ ಸಂಗೀತ ನಿರ್ದೇಶಕ ಪಾಪ್ ಜೆ.ಪ್ರಜೀತ್ ಉಪಸ್ಥಿತರಿದ್ದರು.

error: Content is protected !!