ಮೂರ್ನಾಡು- ಹೊದ್ದೂರು ರಸ್ತೆ ದುರಸ್ತಿಗೆ ಗ್ರಾ.ಪಂ ಸದಸ್ಯರ ಆಗ್ರಹ

February 18, 2021

ಮಡಿಕೇರಿ ಫೆ.18 : ಮೂರ್ನಾಡು- ನಾಪೋಕ್ಲು ರಸ್ತೆಯ ಮೂರ್ನಾಡಿನಿಂದ ಹೊದ್ದೂರು ಗ್ರಾಮದವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಹೊದ್ದೂರು ಗ್ರಾ.ಪಂ ಸದಸ್ಯರು ಒತ್ತಾಯಿಸಿದ್ದಾರೆ.
ನಗರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಹೊದ್ದೂರು ಗ್ರಾ.ಪಂ ಸದಸ್ಯರಾದ ಎಂ.ಬಿ.ಹಮೀದ್, ಕೆ.ಮೊಣ್ಣಪ್ಪ ಹಾಗೂ ವೈ.ಎಸ್.ಲಕ್ಷ್ಮೀ ಹೊದ್ದೂರು ಗ್ರಾಮಕ್ಕಾಗಿ ನಾಪೋಕ್ಲು-ಭಾಗಮಂಡಲವನ್ನು ತಲುಪುವ ರಸ್ತೆಯಲ್ಲಿ ವಾಹನ ಸಂಚಾರ ಅಸಾಧ್ಯವಾಗಿದೆ. ದ್ವಿಚಕ್ರ ವಾಹನಗಳು ಬಿದ್ದು, ಚಾಲಕರು ಪ್ರಾಣಪಾಯದಿಂದ ಪಾರಾದ ಘಟನೆಗಳೂ ನಡೆದಿದೆ. ರಸ್ತೆ ತುಂಬಾ ಹೊಂಡ, ಗುಂಡಿಗಳಿರುವುದರಿಂದ ಪಾದಾಚಾರಿಗಳ ಓಡಾಟಕ್ಕೂ ಅಡಚಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಪವಿತ್ರ ಕ್ಷೇತ್ರಗಳಾದ ತಲಕಾವೇರಿ, ಇಗ್ಗುತ್ತಪ್ಪ ದೇವಸ್ಥಾನ ಮತ್ತು ಎಮ್ಮೆಮಾಡು ದರ್ಗಾಕ್ಕೆ ಹೋಗುವ ಪ್ರಮುಖ ರಸ್ತೆ ಇದಾಗಿದ್ದು, ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಇನ್ನೆರಡು ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ತಕ್ಷಣ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಮಳೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಎಲ್ಲಾ ಸಾಧ್ಯತೆಗಳಿದೆ ಎಂದು ತಿಳಿಸಿರುವ ಸದಸ್ಯರುಗಳು, ಸೂಕ್ತ ಕ್ರಮ ಕೈಗೊಂಡು ಕಾಮಗಾರಿ ಆರಂಭಿಸದಿದ್ದಲ್ಲಿ ಗ್ರಾಮಸ್ಥರನ್ನು ಒಗ್ಗೂಡಿಸಿ ರಸ್ತೆ ತಡೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

error: Content is protected !!