ಫೆ.20 ರಂದು ತಹಶೀಲ್ದಾರರಿಂದ ಹೊದ್ದೂರಿನಲ್ಲಿ ಗ್ರಾಮ ವಾಸ್ತವ್ಯ

February 18, 2021

ಮಡಿಕೇರಿ ಫೆ.18 : ಸರ್ಕಾರದ ನಿರ್ದೇಶನದಂತೆ ಮಡಿಕೇರಿ ಹೋಬಳಿಯ ಹೊದ್ದೂರು ಗ್ರಾಮದಲ್ಲಿ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಫೆಬ್ರವರಿ, 20 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹೊದ್ದೂರು ಗ್ರಾಮದ ಕಬಡಕೇರಿಯ ಧವಸ ಭಂಡಾರದಲ್ಲಿ ನಡೆಯಲಿದೆ ಎಂದು ತಹಶೀಲ್ದಾರ್ ಮಹೇಶ್ ಅವರು ತಿಳಿಸಿದ್ದಾರೆ.
ಕಂದಾಯ ಇಲಾಖೆಯ ರೈತರ ದಾಖಲೆಗಳು ಹಾಗೂ ಸೇವೆಯನ್ನು ಪರಿಶೀಲಿಸಿ ಪರಿಹಾರ ಕ್ರಮಕೈಗೊಳ್ಳಲಿದ್ದಾರೆ. ತಾಲ್ಲೂಕು ಆಡಳಿತದಿಂದ ಸಮೀಪದ ಹೊದ್ದೂರು ಗ್ರಾಮದಲ್ಲಿ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಭೆಯಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ತಾಲ್ಲೂಕು ತಹಶೀಲ್ದಾರ್ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕಂದಾಯ, ಭೂ ಮಾಪನ ಹಾಗೂ ಆಹಾರ ಇಲಾಖೆಗೆ ಸಂಬಂಧಿಸಿದಂತೆ ಅಹವಾಲುಗಳನ್ನು ಸ್ವೀಕರಿಸಿ ಬಗೆಹರಿಸಲಾಗುವುದು. ಇದರೊಂದಿಗೆ ಪಹಣಿಯಲ್ಲಿನ ಲೋಪದೋಷಗಳ ತಿದ್ದುಪಡಿ, ಪೌತಿ ಖಾತೆ, ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಅಂತ್ಯ ಸಂಸ್ಕಾರ ಪರಿಹಾರ ಧನ, ಅಂಗವಿಕಲರ ವೇತನ, ರಾಷ್ಟ್ರೀಯ ಕುಟುಂಬ ನೆರವು ಯೋಜನೆಗಳ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ತಹಶೀಲ್ದಾರ್ ಅವರು ತಿಳಿಸಿದ್ದಾರೆ.

error: Content is protected !!