ಮಡಿಕೇರಿ ನಗರ ಕೆರೆ ಸಂರಕ್ಷಣೆಗೆ ಒತ್ತು ನೀಡಿ : ಎಂಎಲ್‍ಸಿ ಸುನಿಲ್ ಸುಬ್ರಮಣಿ ಸೂಚನೆ

February 18, 2021

ಮಡಿಕೇರಿ ಫೆ.18 : ಮಡಿಕೇರಿ ನಗರದ ರೋಷನಾರ ಮತ್ತು ಪೊಲೀಸ್ ವಸತಿ ಗೃಹದ ಬಳಿ ಇರುವ ಕೆರೆ ಹಾಗೂ ಕೂಟುಹೊಳೆಗೆ ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಕೆರೆಗಳ ಅಭಿವೃದ್ಧಿ ಸಂಬಂಧಿಸಿದಂತೆ ಮಾಹಿತಿ ಪಡೆದ ವಿಧಾನ ಪರಿಷತ್ ಸದಸ್ಯರು ಮಡಿಕೇರಿ ನಗರದ ಕೆರೆಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆ ಜಂಟಿಯಾಗಿ ಕೆರೆಗಳನ್ನು ಅಭಿವೃದ್ದಿಪಡಿಸಬೇಕು. ಆ ನಿಟ್ಟಿನಲ್ಲಿ ನಗರದ ಎಲ್ಲಾ ಜಲಮೂಲ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಮುತುವರ್ಜಿ ವಹಿಸುವಂತೆ ವಿಧಾನ ಪರಿಷತ್ ಸದಸ್ಯರು ಸೂಚಿಸಿದರು.
ನಗರಾಭಿವೃದ್ಧಿ ಸಚಿವರು ಈಗಾಗಲೇ ನಗರ ಅಭಿವೃದ್ಧಿ ಸಂಬಂಧಿಸಿದಂತೆ ಹಲವು ಸಲಹೆ, ಸೂಚನೆಗಳನ್ನು ನೀಡಿದ್ದು, ಅದರಂತೆ ಕೆರೆ ಅಭಿವೃದ್ಧಿ ಸಂಬಂಧ ಸರ್ವೆ ಮಾಡಿಸಬೇಕು. ಯಾವ ಯಾವ ಹಂತದಲ್ಲಿ ಕೆಲಸ ಆಗಬೇಕು ಎಂಬ ಬಗ್ಗೆ ಮಾಹಿತಿ ನೀಡುವಂತೆ ವಿಧಾನ ಪರಿಷತ್ ಸದಸ್ಯರು ನಿರ್ದೇಶನ ನೀಡಿದರು.
ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡಬೇಕು. ಸರ್ಕಾರದ ಹಂತದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಿಸಲಾಗುವುದು ಎಂದು ಸುನಿಲ್ ಸುಬ್ರಮಣಿ ಅವರು ಹೇಳಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ ಅವರು ಮಡಿಕೇರಿ ನಗರದ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ರೋಷನಾರ ಮತ್ತು ಪೊಲೀಸ್ ವಸತಿ ಗೃಹ ಬಳಿ ಇರುವ ಕೆರೆ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಅವರು ಹೇಳಿದರು.
ಬಳಿಕ ಮಡಿಕೇರಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಕೂಟುಹೊಳೆ ಜಲಾಶಯಕ್ಕೆ ಭೇಟಿ ನೀಡಿ ವಿಧಾನ ಪರಿಷತ್ ಸದಸ್ಯರು ಪರಿಶೀಲಿಸಿದರು. ಕೂಟುಹೊಳೆಯಲ್ಲಿ ಸಂಗ್ರಹವಾಗುತ್ತಿರುವ ನೀರು ಸೋರಿಕೆಯಾಗದಂತೆ ತಡೆಯಬೇಕು. ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಾರದು ಎಂದು ಸುನಿಲ್ ಸುಬ್ರಮಣಿ ಅವರು ನಿರ್ದೇಶನ ನೀಡಿದರು.
ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ಕೂಟುಹೊಳೆ ಜಲಾಶಯ ನೀರಿನ ಸಂಗ್ರಹಣೆ ಹಾಗೂ ಕೆರೆಗಳ ಅಭಿವೃದ್ಧಿ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಲಾವಣ್ಯ, ನಗರಸಭೆ ಕಂದಾಯಾಧಿಕಾರಿ ತಾಹಿರ್, ನಗರಸಭೆ ಎಇಇ ರಾಜೇಂದ್ರ ಕುಮಾರ್, ಎಇಗಳಾದ ಶಮಂತ್, ಸಜಿತ್ ಇತರರು ಹಾಜರಿದ್ದರು.

error: Content is protected !!