ಗಾಂಧಿ ಮಂಟಪದ ಪರಿಸರಕ್ಕೆ ದಕ್ಕೆ : ಸರ್ವೋದಯ ಸಮಿತಿ ಅಸಮಾಧಾನ : ಮಾರಾಟ ಮಳಿಗೆ ತೆರವಿಗೆ ಆಗ್ರಹ

February 18, 2021

ಮಡಿಕೇರಿ ಫೆ.18 : ನಗರದಲ್ಲಿರುವ ಗಾಂಧಿ ಮಂಟಪದ ಗೌರವಕ್ಕೆ ದಕ್ಕೆಯಾಗಿರುವ ಮಾರಾಟ ಮಳಿಗೆ, ಕಾರ್ಮಿಕರ ಟೆಂಟ್‍ಗಳು ಮತ್ತು ಮಣ್ಣಿನ ರಾಶಿಯನ್ನು ತಕ್ಷಣ ತೆರವುಗೊಳಿಸಬೇಕೆಂದು ಕೊಡಗು ಜಿಲ್ಲಾ ಸರ್ವೋದಯ ಸಮಿತಿ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿಯ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ಅವರು ಗಾಂಧಿ ಮಂಟಪದ ಸುತ್ತಮುತ್ತಲಿನ ಪರಿಸರಕ್ಕೆ ತನ್ನದೇ ಆದ ಗೌರವವಿದ್ದು, ಇಲ್ಲಿನ ಶುಚಿತ್ವವನ್ನು ಕಾಪಾಡುವುದು ಹಾಗೂ ಮಹಾತ್ಮ ಗಾಂಧಿ ಅವರಿಗೆ ಅಗೌರವವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಇಲ್ಲಿಯವರೆಗೆ ಸಮಿತಿ, ವಿವಿಧ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರು ಗಾಂಧಿ ಮಂಟಪವನ್ನು ಪೂಜ್ಯಭಾವದಿಂದ ನೋಡುತ್ತಾ, ಇಲ್ಲಿನ ಶುಚಿತ್ವವನ್ನು ಕಾಪಾಡುತ್ತಾ ಬಂದಿದ್ದಾರೆ. ಅಲ್ಲದೆ ಸಮಿತಿಯು ಈ ಪ್ರದೇಶದಲ್ಲಿ ದೇಶದ ಗಮನ ಸೆಳೆಯಬಹುದಾದ ಗಾಂಧಿ ಭವನ ಮತ್ತು ಉದ್ಯಾನವನ ನಿರ್ಮಾಣಕ್ಕೂ ಯೋಜನೆ ರೂಪಿಸಿ ಸರ್ಕಾರದ ಸಹಕಾರದ ನಿರೀಕ್ಷೆಯಲ್ಲಿದೆ. ಆದರೆ ಇದೀಗ ದಿಢೀರ್ ಆಗಿ ಗೌರವಯುತವಾದ ಗಾಂಧಿ ಮಂಟಪದ ಪರಿಸರಕ್ಕೆ ದಕ್ಕೆ ತರುವ ಬೆಳವಣಿಗೆಗಳು ಕಂಡು ಬಂದಿದ್ದು, ಇದನ್ನು ಖಂಡಿಸುವುದಾಗಿ ಅವರುಗಳು ಹೇಳಿದ್ದಾರೆ.
ಗಾಂಧಿ ಮಂಟಪವನ್ನೇ ಮರೆಮಾಚಿ ಕಾವೇರಿ ವಸ್ತ್ರಸಿರಿ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಗೆ ಅವಕಾಶ ನೀಡಲಾಗಿದೆ. ಅದರ ಪಕ್ಕದಲ್ಲೇ ಕಾರ್ಮಿಕರ ಟೆಂಟ್‍ಗಳನ್ನು ನಿರ್ಮಿಸಲಾಗಿದೆಯಲ್ಲದೆ ಗಾಂಧಿ ಮೈದಾನದ ತುಂಬಾ ಮಣ್ಣಿನ ರಾಶಿ ಹಾಕಿ ಇಡೀ ಪರಿಸರವನ್ನು ಹಾಳು ಮಾಡಲಾಗಿದೆ.
ಈಗಾಗಲೇ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಮೈದಾನ ಅಲಭ್ಯವಾಗಿದೆ. ತಕ್ಷಣ ಜಿಲ್ಲಾಡಳಿತ ಹಾಗೂ ನಗರಸಭೆ ಎಚ್ಚೆತ್ತುಕೊಂಡು ಗಾಂಧಿ ಮಂಟಪದ ಗೌರವಕ್ಕೆ ದಕ್ಕೆ ಉಂಟು ಮಾಡಿರುವ ಮಾರಾಟ ಮಳಿಗೆ ಮತ್ತು ಕಾರ್ಮಿಕರ ಟೆಂಟ್‍ಗಳನ್ನು ತೆರವುಗೊಳಿಸಿ ಶುಚಿತ್ವವನ್ನು ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ. ಮೈದಾನದಲ್ಲಿ ಸುರಿದಿರುವ ಮಣ್ಣಿನ ರಾಶಿಯನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಮತ್ತು ಇನ್ನು ಮುಂದೆ ಯಾವುದೇ ಕಾರಣಕ್ಕೂ ಗಾಂಧಿ ಮಂಟಪದ ಪರಿಸರವನ್ನು ವಾಣಿಜ್ಯ ಉದ್ದೇಶ ಸೇರಿದಂತೆ ಇತರ ಚಟುವಟಿಕೆಗಳಿಗೆ ನೀಡಬಾರದೆಂದು ಅಂಬೆಕಲ್ ಕುಶಾಲಪ್ಪ ಹಾಗೂ ಎಸ್.ಐ.ಮುನೀರ್ ಅಹಮ್ಮದ್ ಒತ್ತಾಯಿಸಿದ್ದಾರೆ.

error: Content is protected !!