ಎಲ್ಲರ ರಕ್ಷಣೆ ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ : ಸೋಮವಾರಪೇಟೆಯಲ್ಲಿ ಪ್ರಜ್ವಲ್ ರೇವಣ್ಣ

February 18, 2021

ಸೋಮವಾರಪೇಟೆ ಫೆ.18 : ತತ್ವ ಮತ್ತು ಸಿದ್ಧಾಂತದೊಂದಿಗೆ ಸಮಾಜದ ಎಲ್ಲಾ ವರ್ಗದವರ ರಕ್ಷಣೆ ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅಭಿಪ್ರಾಯಿಸಿದರು.
ಸೋಮವಾರಪೇಟೆÀ ಒಕ್ಕಲಿಗರ ಸಮುದಾಯಭವನದಲ್ಲಿ ಬುಧವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜೆಡಿಎಸ್ ಪಕ್ಷ ಹಳ್ಳಿಯಿಂದ ದಿಲ್ಲಿಯವರೆಗೆ ವ್ಯಾಪಿಸಲು ಪಕ್ಷದ ಕಾರ್ಯಕರ್ತರೇ ಕಾರಣ. ಕೊಡಗಿನಲ್ಲಿ ಪಕ್ಷ ಬಲಿಷ್ಠವಾಗಿದೆ ಎನ್ನುವುದಕ್ಕೆ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ 130 ಸ್ಥಾನಗಳನ್ನು ಗಳಿಸಿರುವುದೇ ಸಾಕ್ಷಿಯಾಗಿದೆ. ಕೆಲವರು ಪಕ್ಷವನ್ನು ಒಕ್ಕಲಿಗರ ಹಾಗೂ ರೈತರ ಪಕ್ಷ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಅಲ್ಪ ಸಂಖ್ಯಾತರು, ಶೋಷಿತರು ಸೇರಿದಂತೆ ಸಮಾಜದ ಎಲ್ಲ ಸಮುದಾಯದವರಿಗೆ ಸ್ಥಾನಕೊಟ್ಟ ಏಕೈಕ ಪಕ್ಷ ಜೆಡಿಎಸ್ ಪಕ್ಷವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಮಡಿಕೇರಿ ಕ್ಷೇತ್ರದ ಸಮಿತಿಯನ್ನು ಪುನರ್‍ರಚಿಸಲಾಗುವುದು. ಮಡಿಕೇರಿ, ಸೋಮವಾರಪೇಟೆ ಹಾಗೂ ಕುಶಾಲನಗರಕ್ಕೆ ಪ್ರತ್ಯೇಕವಾಗಿ ಕೋರ್ ಕಮಿಟಿಯನ್ನು ರಚಿಸಲಾಗುವುದು. ಪಕ್ಷದಿಂದ ಹಿರಿಯ ಮುಖಂಡರಾದ ಜೀವಿಜಯ ಅವರು ಹೊರ ಹೋಗಿರುವುದು ಅವರ ವೈಯುಕ್ತಿಕ ವಿಚಾರ. ಅದರಿಂದ ಪಕ್ಷಕ್ಕೆ ಯಾವುದೇ ನಷ್ಟವಾಗಿಲ್ಲ. ಇಂದಿಗೂ ಗ್ರಾಮೀಣ ಸೇರಿದಂತೆ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಪಕ್ಷ ಬಲಿಷ್ಠವಾಗಿದೆ. ಕುಶಾಲನಗರದಲ್ಲಿ ಅಧಿಕಾರವನ್ನು ಪಡೆಯಬೇಕೆಂಬ ಅಚಲ ವಿಶ್ವಾಸದಿಂದ ಬಿಜೆಪಿಯನ್ನು ಬೆಂಬಲಿಸಿದ್ದೆವು. ಆದರೆ, ನಮ್ಮನ್ನು ಕೋಮುವಾದಿ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ಮೂದಲಿಸುತ್ತಾರೆ. ಅದೇ ಕಾಂಗ್ರೆಸ್ ಪಕ್ಷ ಸಕಲೇಶಪುರದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಆಯ್ಕೆಯಲ್ಲಿ ಜೆಡಿಎಸ್‍ಗೆ ಅಧಿಕಾರ ತಪ್ಪಿಸುವ ಉದ್ದೇಶದಿಂದ ಬೆಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ. ಇದು ಕೋಮುವಾದ ಅಲ್ಲವೆ. ಎರಡು ರಾಷ್ಟ್ರೀಯ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಳ್ಳಲಿಲ್ಲವೆ ಎಂದು ಪ್ರಶ್ನಿಸಿದರು.
ಪಕ್ಷವನ್ನು ಸಂಘಟಿಸುವಾಗ ತಾಲ್ಲೂಕು ಕೇಂದ್ರ ಮಾತ್ರ ಅಲ್ಲದೆ, ಹೋಬಳಿ ಮಟ್ಟದಲ್ಲಿಯೂ ಸಭೆ ಕರೆಯಲು ತೀರ್ಮಾನಿಸಲಾಗಿದೆ. ಪಕ್ಷದ ನಾಯಕರ ಆಯ್ಕೆಯನ್ನು ಕಾರ್ಯಕರ್ತರ ಅಭಿಪ್ರಾಯ ಪಡೆದೆ ನೇಮಕಮಾಡಲಾಗುವುದು. ಪ್ರತಿಯೊಬ್ಬ ಕಾರ್ಯಕರ್ತನೂ ತಾನೇ ನಾಯಕ ಎಂದು ಮಂಚೂಣಿಯಲ್ಲಿ ಕೆಲಸ ಮಾಡಿದರೆ ಮಾತ್ರ ಪಕ್ಷದ ಬೆಳವಣಿಗೆ ಸಾಧ್ಯ ಎಂದರು.
ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ, ಇಲ್ಲಿನವರಿಗೆ ಬಜೆಟ್‍ನಲ್ಲಿ ಯಾವುದೇ ಕೊಡುಗೆ ನೀಡಿಲ್ಲ. ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಸೇರಿದಂತೆ ಕಾಫಿ ಬೆಳೆಯುವ ಪ್ರದೇಶಗಳ ಬೆಳಗಾರರಿಗೆ ಬಜೆಟ್‍ನಲ್ಲಿ ಯಾವುದೇ ಪ್ರಯೋಜನಕಾರಿಯಾದ ಕೊಡುಗೆ ನೀಡಿಲ್ಲ. ಕಾಫಿ ಬೆಳೆಯುವ ಪ್ರದೇಶಗಳನ್ನು ಪ್ರತನಿಧಿಸುವ ಬಿಜೆಪಿ ಸಂಸದರು ಹಾಗೂ ಶಾಸಕರು ಇದರ ಬಗ್ಗೆ ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಧ್ವನಿ ಎತ್ತಲಿಲ್ಲ. ಇನ್ನೇಕೆ ಬಿಜೆಪಿಗೆ ಮತ ನೀಡಬೇಕೆಂದು ಪ್ರಶ್ನಿಸಿದ ಅವರು, ಕೊಡಗಿನಲ್ಲಿ ಪ್ರಕೃತ್ತಿ ವಿಕೋಪ ನಡೆದಾಗ ಕುಮಾರಸ್ವಾಮಿಯವರು ಇಲ್ಲಿಯವರ ನೋವಿಗೆ ಸ್ಪಂಧಿಸಿದ್ದಾರೆ ಎಂದು ಸ್ಮರಿಸಿದರು.
ಸಭೆಯಲ್ಲಿ ಪಕ್ಷದ ಮುಖಂಡರಾದ ಎಚ್.ಆರ್. ಸುರೇಶ್, ಬಗ್ಗನ ಅನಿಲ್, ಕೊಡ್ಲಿಪೇಟೆ ತಮ್ಮಯ್ಯ, ಜಾನಕಿ ವೆಂಕಟೇಶ್, ಕಾಟ್ನಮನೆ ವಿಠಲ, ಜಯಾನಂದ, ಜಯಂತಿ ಶಿವಕುಮಾರ್, ಜಲಾ ಹೂವಯ್ಯ, ಕೆ.ಟಿ. ಪರಮೇಶ್, ಡಿ.ಎಸ್. ಚಂಗಪ್ಪ ಉಪಸ್ಥಿತರಿದ್ದರು.