ಕಾಮಗಾರಿ ಪೂರ್ಣಗೊಂಡರೂ ಬಿಡುಗಡೆಯಾಗದ ಹಣ : ಕೊಡಗು ಗುತ್ತಿಗೆದಾರರ ಪ್ರತಿಭಟನೆ

February 19, 2021

ಮಡಿಕೇರಿ ಫೆ.19 : ಕೊಡಗು ಜಿಲ್ಲೆಯಾದ್ಯಂತ ಪೂರ್ಣಗೊಂಡಿರುವ ಮಳೆಹಾನಿ ಕಾಮಗಾರಿಗಳು ಮತ್ತು ಇತರೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಗುತ್ತಿಗೆದಾರರಿಗೆÀ ಹಣ ಬಿಡುಗಡೆಯಾಗದೇ ಇರುವುದರಿಂದ ಅಸಮಾಧಾನಗೊಂಡಿರುವ ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಯಾವುದೇ ಕಾಮಗಾರಿಗಳಿಗೆ ಬಿಲ್ ಪಾವತಿಯಾಗದೆ ಇರುವುದರಿಂದ ಗುತ್ತಿಗೆದಾರರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ತುರ್ತು ಕಾಮಗಾರಿ ಕೈಗೊಳ್ಳಲು ತೊಂದರೆಯಾಗುತ್ತಿದ್ದು, ಕಾಮಗಾರಿಗಳಿಗೆ ಸರ್ಕಾರದ ನಿಯಮದಂತೆ ಶೇ.22ರಷ್ಟು ತೆರಿಗೆ ಕಡಿತಗೊಳ್ಳುವುದರಿಂದ ಗುತ್ತಿಗೆದಾರರು ಮತ್ತಷ್ಟು ಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ರವಿಚಂಗಪ್ಪ ಅವರು ಕೊಡಗು ಜಿಲ್ಲೆಗೆ ಕಳೆದ ಮೂರು ವರ್ಷಗಳಿಂದ ಪೂರ್ಣಗೊಂಡ ಕಾಮಗಾರಿಗೆ ಸಮರ್ಪಕವಾಗಿ ಹಣ ಬಿಡುಗಡೆಯಾಗಿಲ್ಲ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಈಗಾಗಲೇ ನಿರ್ವಹಿಸಿರುವÀ ಕಾಮಗಾರಿಗಳಿಗೆ 2 ವರ್ಷಗಳಿಂದ ಬಿಲ್ ಪಾವತಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಳೆಹಾನಿ ದುರಸ್ತಿ ಕಾರ್ಯಗಳ ಮೊತ್ತ 40 ಕೋಟಿ ರೂ. ಬಾಕಿ ಇದ್ದು, ಲೋಕೋಪಯೋಗಿ ಇಲಾಖೆಯಿಂದ 35 ಕೋಟಿ ರೂ. ಬರಬೇಕಿದೆ. ಯಾವುದೇ ಕಾಮಗಾರಿಗಳಿಗೆ ಬಿಲ್ ಪಾವತಿಯಾಗದೆ ಇರುವುದರಿಂದ ಗುತ್ತಿಗೆದಾರರು ಸಂಕಷ್ಟವನ್ನು ಎದುರಿಸುವಂತಾಗಿದ್ದು, ತುರ್ತು ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಮಗಾರಿಗಳಿಗೆ ಸರ್ಕಾರದ ನಿಯಮದಂತೆ ಶೇ.22ರಷ್ಟು ತೆರಿಗೆ ಕಡಿತಗೊಳ್ಳುವುದರಿಂದ ಗುತ್ತಿಗೆದಾರರು ಮತ್ತಷ್ಟು ಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ 75:25 ಅನುಪಾತದಲ್ಲಿ ಹಣ ಬಿಡುಗಡೆಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ರವಿಚಂಗಪ್ಪ ಒತ್ತಾಯಿಸಿದರು.
ಈ ಹಿಂದೆ ಶೇ.75 ರಷ್ಟು ಹಣವನ್ನು ಪಾವತಿ ಮಾಡಬೇಕೆಂದು ಒತ್ತಾಯಿಸಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲಾಗಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಹಣ ಬಿಡುಗಡೆಗೆ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ರವೀಂದ್ರ ರೈ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಲಾರೆನ್ಸ್, ಮಡಿಕೇರಿ ತಾಲೂಕು ಅಧ್ಯಕ್ಷ ರಾಜೀವ್ ಲೋಚನ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ವಿಜು ಸುಬ್ರಮಣಿ, ರಾಜ್ಯ ಹಾಗೂ ತಾಲ್ಲೂಕು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!