ಕೊಡವ ಸಮಾಜಗಳ ನಿಯೋಗದಿಂದ ಮುಖ್ಯಮಂತ್ರಿ ಭೇಟಿ : ಕೌಟುಂಬಿಕ ಹಾಕಿ ಹಬ್ಬಕ್ಕೆ 5 ಕೋಟಿ ನೀಡಲು ಮನವಿ

February 19, 2021

ಮಡಿಕೇರಿ ಫೆ.19 : ಕ್ರೀಡಾ ಕ್ಷೇತ್ರದಲ್ಲಿ ದಾಖಲೆ ಬರೆದಿರುವ ಕೊಡವ ಕೌಟುಂಬಿಕ ಹಾಕಿ ಹಬ್ಬಕ್ಕೆ ಪ್ರತಿವರ್ಷ ಬಜೆಟ್‍ನಲ್ಲಿ 5 ಕೋಟಿ ರೂ. ಅನುದಾನ ಮೀಸಲಿಡಬೇಕೆಂದು ಒತ್ತಾಯಿಸಿ ಬೆಂಗಳೂರು ಕೊಡವ ಸಮಾಜದ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜಗಳ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಅವರ ಮುಂದಾಳತ್ವದಲ್ಲಿ ಇಂದು ಬೆಂಗಳೂರು ಹಾಗೂ ನಾಪೋಕ್ಲು ಕೊಡವ ಸಮಾಜದ ಪ್ರತಿನಿಧಿಗಳು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದರಲ್ಲದೆ, ಕೊಡವ ಕೌಟುಂಬಿಕ ಹಾಕಿ ಹಬ್ಬದ ವಿಶಿಷ್ಟತೆಯ ಕುರಿತು ವಿವರಿಸಿದರು.
ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯು ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲಾಗಿದ್ದು, ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲಾಗಬೇಕಾಗಿದೆ. ಕಳೆದ 21 ವರ್ಷಗಳಿಂದ ಕೊಡಗಿನಲ್ಲಿ ನಡೆಯುತ್ತಿರುವ ಕೊಡವ ಹಾಕಿ ಹಬ್ಬದಲ್ಲಿ ಪ್ರತಿವರ್ಷ 6 ಸಾವಿರಕ್ಕೂ ಅಧಿಕ ಆಟಗಾರರು ಪಾಲ್ಗೊಳ್ಳುತ್ತಿದ್ದು, ಈ ಆಟಗಾರರಲ್ಲಿ ಪ್ರತಿಭಾವಂತರು ಈಗಾಗಲೇ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಆಟವಾಡಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಕ್ರೀಡಾಪಟುಗಳು ದೇಶದ ಕ್ರೀಡಾ ಕ್ಷೇತ್ರಕ್ಕೆ ದೊಡ್ಡ ಆಸ್ತಿಯಾಗಿದ್ದಾರೆ.
ಸುಮಾರು ಒಂದು ತಿಂಗಳ ಕಾಲ ನಡೆಯುವ ಕೊಡವ ಹಾಕಿ ಹಬ್ಬಕ್ಕೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತಿದೆ. ಆದ್ದರಿಂದ ಕೊಡವ ಹಾಕಿ ಹಬ್ಬ, ಕೊಡವ ಸಂಸ್ಕøತಿ, ಪರಂಪರೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿವರ್ಷದ ರಾಜ್ಯ ಸರ್ಕಾರದ ಪ್ರತಿವರ್ಷದ ಬಜೆಟ್‍ನಲ್ಲಿ ಕನಿಷ್ಠ 5 ಕೋಟಿ ರೂಪಾಯಿಗಳನ್ನು ಮೀಸಲಿಡಬೇಕೆಂದು ಪ್ರಮುಖರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.
ನಾಪೋಕ್ಲು ಗ್ರಾಮದಲ್ಲಿ ಅತೀ ಹೆಚ್ಚು ಬಾರಿ ಕೊಡವ ಹಾಕಿ ಹಬ್ಬ ನಡೆದಿದೆ. ಮುಂದೆ ನಾಲ್ಕು ವರ್ಷಗಳ ಕಾಲ ಇಲ್ಲಿಯೇ ಹಾಕಿ ಉತ್ಸವ ನಡೆಯಲಿದೆ. ಈ ಗ್ರಾಮದಲ್ಲಿ ಒಂದು ಉತ್ತಮವಾದ ಬೃಹತ್ ಕ್ರೀಡಾಂಗಣ ನಿರ್ಮಿಸಲು ಕೂಡ ಈ ವರ್ಷದ ಬಜೆಟ್‍ನಲ್ಲಿ ಹಣ ಮೀಸಲಿಡಬೇಕು ಮತ್ತು ಬಜೆಟ್‍ನಲ್ಲಿ ರೂ.5 ಕೋಟಿ ಮೀಸಲಿಡುವ ಮೂಲಕ ಕ್ರೀಡಾ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿರುವ ಕೊಡಗಿನ ಹಾಕಿಪಟುಗಳಿಗೆ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ಕೊಡವ ಹಾಕಿ ಅಕಾಡೆಮಿ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಶಿಫಾರಸ್ಸಿನ ಪತ್ರದೊಂದಿಗೆ ಕೊಡವ ಸಮಾಜಗಳ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
::: ಕುಲ್ಲೇಟಿರ ಹಾಕಿ ಅನುದಾನಕ್ಕೆ ಮನವಿ :::
ಕೊಡವ ಹಾಕಿ ಹಬ್ಬಕ್ಕೆ ಪ್ರತಿವರ್ಷ ಸರ್ಕಾರದ ಮೂಲಕ 40 ಲಕ್ಷ ರೂ. ನೀಡುವುದಾಗಿ ಈ ಹಿಂದೆ ಭರವಸೆ ದೊರೆತ್ತಿತ್ತು. 2018 ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆದ ಕುಲ್ಲೇಟಿರ ಹಾಕಿ ಹಬ್ಬಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಬರಬೇಕಾಗಿರುವ 40 ಲಕ್ಷ ರೂ. ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ ಎಂದು ಮುಖ್ಯಮಂತ್ರಿಗಳ ಗಮನ ಸೆಳೆದ ತೇಲಪಂಡ ಶಿವಕುಮಾರ್ ನಾಣಯ್ಯ ಅವರು ಈ ಹಣವನ್ನು ತಕ್ಷಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಮನವಿ ಸಲ್ಲಿಸಿದ ನಂತರ ಮಾತನಾಡಿದ ಶಿವಕುಮಾರ್ ನಾಣಯ್ಯ ಅವರು ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬಜೆಟ್‍ನಲ್ಲಿ 5 ಕೋಟಿ ರೂ. ಮೀಸಲಿಡುವ ವಿಶ್ವಾಸವಿದೆ ಎಂದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ.ನಾಣಯ್ಯ, ನಾಪೋಕ್ಲು ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಪ್ರಮುಖರಾದ ಕುಲ್ಲೇಟಿರ ಬಿನ್ನಿ ಬೋಪಣ್ಣ, ಮುಕ್ಕಾಟಿರ ಪೂಣಚ್ಚ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.

error: Content is protected !!