ಫೆ.26 ರಿಂದ ಮಾ.5 ರವರೆಗೆ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ : ಮಾ.1 ರಂದು ಅನ್ನದಾನ

February 19, 2021

ಮಡಿಕೇರಿ ಫೆ.19 : ಭಾವೈಕ್ಯತೆಯ ಎಮ್ಮೆಮಾಡು ಕ್ಷೇತ್ರದಲ್ಲಿ ಸೂಫಿ ಶಹೀದ್(ರ.ಅ) ಹಾಗೂ ಸಯ್ಯದ್ ಹಸ್ಸನ್ ಸಖಾಫ್ (ರ.ಅ) ಅವರ ಹೆಸರಿನಲ್ಲಿ ನಡೆಸಿಕೊಂಡು ಬರುವ ವಾರ್ಷಿಕ ಮಖಾಂ ಉರೂಸ್ ಕಾರ್ಯಕ್ರಮ ಫೆ.26 ರಿಂದ ಮಾ.5 ರವರೆಗೆ ನಡೆಯಲಿದೆ ಎಂದು ತಾಜುಲ್ ಇಸ್ಲಾಂ ಮುಸ್ಲಿಂ ಜಮಾ-ಅತ್‍ನ ಆಡಳಿತ ಮಂಡಳಿ ತಿಳಿಸಿದೆ.
ಉರೂಸ್ ನ ಹತ್ತು ದಿನಗಳ ಕಾಲ ಪ್ರಮುಖ ಪಂಡಿತರಿಂದ ಮತ ಪ್ರವಚನಗಳು ನಡೆಯಲಿದ್ದು, ಮಾ.1 ರಂದು ಸಾರ್ವಜನಿಕ ಸಭೆ ಮತ್ತು ಅನ್ನದಾನ ನಡೆಯಲಿದೆ.
ಎಮ್ಮೆಮಾಡು ಮಡಿಕೇರಿ ತಾಲೂಕು ನಾಲ್ಕು ನಾಡಿನ ಜೀವನದಿ ಕಾವೇರಿಯ ದಡದಲ್ಲಿರುವ ಗ್ರಾಮ. ದಕ್ಷಿಣ ಭಾರತ, ದಕ್ಷಿಣ ಕರ್ನಾಟಕದ ಮುಸ್ಲಿಂ ಪುಣ್ಯ ಕ್ಷೇತ್ರಗಳ ಪೈಕಿ ಎಮ್ಮೆಮಾಡು ಗ್ರಾಮಕ್ಕೆ ಅಗ್ರಸ್ಥಾನ. ಏಕೆಂದರೆ ಇಲ್ಲಿ ಸತ್ಯಸಂಧ ದೈವ ಭಕ್ತ, ಪವಾಡ ಪುರುಷ ಸೂಫಿ ಸಯ್ಯದ್ ವಲಿಯುಲ್ಲಾ ಚಿರ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ನಂಬಿಕೆಯೇ ಇದಕ್ಕೆ ಕಾರಣ.
ಮಡಿಕೇರಿಯಿಂದ- ನಾಪೆÇೀಕ್ಲು ಮಾರ್ಗವಾಗಿ 32 ಕಿ.ಮೀ. ಚಲಿಸಿದರೆ ಈ ಗ್ರಾಮಕ್ಕೆ ತಲುಪಬಹುದು. ಪ್ರತಿ ವರ್ಷ ಫೆಬ್ರವರಿ ಕೊನೆಯ ವಾರ ಮತ್ತು ಮಾರ್ಚ್ ತಿಂಗಳಲ್ಲಿ ಊರೂಸ್ ನಡೆಯುತ್ತದೆ.
::: ಇತಿಹಾಸ :::
ಸಾವಿರಾರು ವರ್ಷಗಳ ಹಿಂದೆ ಸೂಫಿ-ಸಯ್ಯದ್ ಅವರು ಮರಣ ಶಯ್ಯೆಯಲ್ಲಿ ಬರಕೊಲ್ಲಿ ಎಂಬ ಜಾಗದಲ್ಲಿ ಬಂಡೆಯ ಮೇಲೆ ಜೀವನ್ಮರಣದ ಸ್ಥಿತಿಯಲ್ಲಿದ್ದಾಗ ನೆಲಜಿ ಗ್ರಾಮದ ಕೊಡವ ಜನಾಂಗಕ್ಕೆ ಸೇರಿದ ಮಣವಟ್ಟಿರ ಕುಟುಂಬದವರ ಗೂಟಕ್ಕೆ ಕಟ್ಟಿ ಹಾಕಿದ ಹಸುವೊಂದು ಹಗ್ಗವನ್ನು ತುಂಡರಿಸಿಕೊಂಡು ಬಂದು ಮರಣ ಶಯ್ಯೆಯಲ್ಲಿದ್ದ ಸೂಫಿ-ಸಯ್ಯದ್ಗೆ ಹಾಲುಣಿಸಿತು ಎಂಬ ಪ್ರತೀತಿ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಎಮ್ಮೆಮಾಡುವಿನ ಬರಕೊಲ್ಲಿ ಎಂಬ ಜಾಗದಲ್ಲಿ ಕಲ್ಲು ಬಂಡೆಯ ಮೇಲೆ ಹಸು ಹಾಲುಣಿಸಿದ ಕುರುಹಾಗಿ ಹಸುವಿನ ಹೆಜ್ಜೆ ಮತ್ತು ಹಗ್ಗದ ಗುರುತು ಇದೆ. ಹೀಗಾಗಿ ಇದು ಒಂದು ಪ್ರಸಿದ್ಧ ತಾಣವಾಗಿದೆ. ಇಲ್ಲಿ ಗೋ ಹತ್ಯೆಯನ್ನು ನಿಷೇಧಿಸಲಾಗಿದ್ದು, ಗೋ ಹತ್ಯೆ ಮಾಡಿದವರಿಗೆ ಮಾರಾಣಾಂತಿಕ ಕಾಯಿಲೆ ಬಂದ ನಿದರ್ಶನವಿದೆ. ಜಾನುವಾರುಗಳಿಗೆ ರೋಗ ಬಂದರೆ ಇಲ್ಲಿಗೆ ಹರಕೆ ಮಾಡಿಕೊಂಡರೆ ಕೂಡಲೇ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ.

error: Content is protected !!