ಕೊಡಗಿನಲ್ಲಿ ಕ್ರೀಡಾ ವಿಶ್ವ ವಿದ್ಯಾಲಯ ಸ್ಥಾಪನೆ : ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕೊಡವ ಸಮಾಜಗಳ ನಿಯೋಗ

ಮಡಿಕೇರಿ ಫೆ.19 : ಕ್ರೀಡಾ ಕಲಿಗಳ ಜಿಲ್ಲೆ ಕೊಡಗಿನಲ್ಲಿ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾ ವಿಶ್ವ ವಿದ್ಯಾಲಯವೊಂದನ್ನು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಸ್ಥಾಪಿಸಬೇಕೆಂದು ಬೆಂಗಳೂರು ಕೊಡವ ಸಮಾಜದ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದೆ.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ.ನಾಣಯ್ಯ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋಗ ಕ್ರೀಡಾ ವಿಶ್ವ ವಿದ್ಯಾಲಯದ ಅವಶ್ಯಕತೆಯ ಬಗ್ಗೆ ವಿವರಿಸಿತು. ರಾಜ್ಯ ಮತ್ತು ರಾಷ್ಟ್ರದ ಕ್ರೀಡಾ ಕ್ಷೇತ್ರಕ್ಕೆ ಸಾವಿರಾರು ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿರುವ ಕೊಡಗು ಜಿಲ್ಲೆಯ ಗ್ರಾಮ ಗ್ರಾಮಗಳಲ್ಲಿ ಕ್ರೀಡಾ ಪ್ರತಿಭೆಗಳಿದ್ದಾರೆ. ಜಿಲ್ಲೆಯ ಪ್ರತಿಯೊಬ್ಬರಲ್ಲೂ ಕ್ರೀಡಾ ಉತ್ಸಾಹವಿದೆ, ಆದರೆ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಸ್ಫೂರ್ತಿ ತುಂಬಬಹುದಾದ ಸೌಲಭ್ಯಗಳ ಕೊರತೆ ಜಿಲ್ಲೆಯನ್ನು ಕಾಡುತ್ತಿದೆ.
ಕ್ರೀಡಾ ಕ್ಷೇತ್ರಕ್ಕೆ ಹೇಗೆ ಪದಾರ್ಪಣೆ ಮಾಡಬೇಕೆನ್ನುವ ಗೊಂದಲ ಮತ್ತು ಅಸಹಾಯಕತೆಯ ನಡುವೆಯೇ ಜಿಲ್ಲೆಯ ಕ್ರೀಡಾ ಪ್ರತಿಭೆಗಳು ಮೂಲೆ ಗುಂಪಾಗುತ್ತಿದ್ದಾರೆ. ಆದ್ದರಿಂದ ಮತ್ತಷ್ಟು ಕ್ರೀಡಾಪಟುಗಳನ್ನು ಸಜ್ಜುಗೊಳಿಸುವುದಕ್ಕಾಗಿ ಜಿಲ್ಲೆಗೊಂದು ಕ್ರೀಡಾ ವಿಶ್ವ ವಿದ್ಯಾಲಯದ ಅಗತ್ಯವಿದ್ದು, ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ಈ ಬೇಡಿಕೆಯನ್ನು ಈಡೇರಿಸಿಕೊಡಬೇಕೆಂದು ಪ್ರಮುಖರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ.ನಾಣಯ್ಯ ಅವರೊಂದಿಗೆ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ, ನಾಪೋಕ್ಲು ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಪ್ರಮುಖರಾದ ಕುಲ್ಲೇಟಿರ ಬಿನ್ನಿ ಬೋಪಣ್ಣ, ಮುಕ್ಕಾಟಿರ ಪೂಣಚ್ಚ ಮತ್ತಿತರರು ನಿಯೋಗದಲ್ಲಿದ್ದರು.