ಮಡಿಕೇರಿ ಮೆಡಿಕಲ್ ಕಾಲೇಜ್‍ನಲ್ಲಿ ನರ್ಸಿಂಗ್ ಕೋರ್ಸ್ : ಸರ್ಕಾರದಿಂದ ಅನುಮತಿ

February 19, 2021

ಮಡಿಕೇರಿ ಫೆ.19 : ಕೊಡಗು ಜಿಲ್ಲೆಯ ಬಹು ದಿನಗಳ ಬೇಡಿಕೆಯಾಗಿದ್ದ ಬಿಎಸ್ಸಿ ನರ್ಸಿಂಗ್ ಕೋರ್ಸ್ ಪ್ರಾರಂಭಿಸಲು ರಾಜ್ಯ ಸರ್ಕಾರದಿಂದ ಅನುಮತಿ ದೊರೆತಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ(ಮೆಡಿಕಲ್ ಕಾಲೇಜು) ಈ ಕೋರ್ಸ್ ಆರಂಭವಾಗಲಿದ್ದು, 100 ಸರಕಾರಿ ಸೀಟುಗಳ ಪ್ರವೇಶದೊಂದಿಗೆ ಈ ವರ್ಷದಿಂದಲೇ ತರಗತಿ ಪ್ರಾರಂಭವಾಗಲಿದೆ. ಇದು ಕೊಡಗು ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಒಂದು ಕೊಡುಗೆಯಾಗಿಯೂ ಆಗಿದ್ದು, ಇದರಿಂದ ಜಿಲ್ಲೆಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಮತ್ತಷ್ಟು ಅವಕಾಶಗಳು ದೊರಕಿದಂತಾಗಿದೆ.
ನರ್ಸಿಂಗ್ ಕೋರ್ಸ್‍ನ 100 ಸೀಟುಗಳು ಸರ್ಕಾರಿ ಸೀಟುಗಳಾಗಿರುವ ಹಿನ್ನಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೌನ್ಸಿಲಿಂಗ್ ಮೂಲಕ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕೋರ್ಸ್‍ಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವ ಸಾಧ್ಯತೆಯಿದೆ. ಬಡ, ಮಧ್ಯಮ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ ಸರಕಾರಿ ಸೀಟುಗಳು ಕೋರ್ಸ್ ಪೂರೈಸಲು ಅನುಕೂಲ ಕಲ್ಪಿಸಲಿವೆ.
ಈ ಹಿಂದೆ ಜಿಲ್ಲೆಯ ವಿದ್ಯಾರ್ಥಿಗಳು ಬಿಎಸ್ಸಿ ನರ್ಸಿಂಗ್ ತರಬೇತಿಗಾಗಿ ಇತರೆ ಜಿಲ್ಲೆಯ ಖಾಸಗಿ ಅಥವಾ ಸರ್ಕಾರಿ ಕಾಲೇಜನ್ನು ಅವಲಂಭಿಸಬೇಕಿತ್ತು. ಇದೀಗ ಕೊಡಗಿನಲ್ಲಿಯೇ ಶಿಕ್ಷಣ ದೊರಕುತ್ತಿರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ದೊರಕಲಿದೆ. ಜಿಲ್ಲೆಯ ವಿದ್ಯಾರ್ಥಿಗಳಲ್ಲೂ ಕೂಡ ಬಿಎಸ್ಸಿ ನರ್ಸಿಂಗ್ ಕೋರ್ಸ್ ತರಗತಿಗೆ ಸೇರಲು ಆಸಕ್ತಿ ಮೂಡಲಿದ್ದು, ಸರ್ಕಾರಿ ಸೀಟು ಆಗಿರುವುದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಪ್ರಾರಂಭವಾಗುತ್ತಿರುವ ಬಿಎಸ್ಸಿ ನರ್ಸಿಂಗ್ ಕೋರ್ಸ್‍ನಿಂದ ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ತತ್ರೆಯ ಗುಣಮಟ್ಟ ಮತ್ತಷ್ಟು ಏರಿಕೆಯಾಗಲಿದ್ದು, ರೋಗಿಗಳಿಗೆ ಹೆಚ್ಚಿನ ಶುಶ್ರೂಷ ಸೇವೆಯೂ ದೊರೆಯಲಿದೆ. ಈಗಾಗಾಲೇ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಂಬಿಬಿಎಸ್ ಕೋರ್ಸ್, ಪ್ಯಾರ ಮೆಡಿಕಲ್ ಕೋರ್ಸ್ ಪ್ರಾರಂಭಿಸಲಾಗಿದ್ದು, ಇದರ ಜೊತೆಗೆ ಸಂಸ್ಥೆಯಲ್ಲಿ ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ಪ್ರಾರಂಭವಾಗುತ್ತಿರುವುದು ಸಂಸ್ಥೆಯ ಹಿರಿಮೆ ಮತ್ತು ಕ್ಷಮತೆಯನ್ನೂ ಹೆಚ್ಚಿಸಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಸೇವೆ ನೀಡಲು ಸಹಕಾರಿಯಾಗಿದೆ.
:: ಬಾಕ್ಸ್ ::

2014ರಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡು 2016ರಲ್ಲಿ ಕಾಲೇಜು ಆರಂಭವಾಯಿತು. ಪ್ರಸ್ತುತ ಕಾಲೇಜಿನಲ್ಲಿ 750 ಎಂಬಿಬಿಎಸ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯನ್ನಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಎಲ್ಲಾ ವಿಭಾಗಗಳಲ್ಲೂ ನುರಿತ ತಜ್ಞ ವೈದ್ಯರಿಂದ ಸೇವೆಯನ್ನು ನೀಡಲಾಗುತ್ತಿದೆ. ಕಾಲೇಜಿನಲ್ಲಿ ಅತ್ಯುತ್ತಮ ದರ್ಜೆಯ ಬೋಧನಾ ಕೊಠಡಿಗಳು, ಆಧುನಿಕ ಪ್ರಯೋಗಾಲಯಗಳು ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಮ್ಯೂಸಿಯಂ ಕೂಡ ಇದೆ.

ಕೊಡಗು ವೈದ್ಯಕೀಯ ಕಾಲೇಜಿನ ವ್ಯಾಪ್ತಿಯಲ್ಲಿ ಬಿಎಸ್ಸಿ ನರ್ಸಿಂಗ್ ಕೋರ್ಸ್‍ಗೆ ಸರ್ಕಾರದಿಂದ ಅನುಮತಿ ದೊರಕಿದೆ. ಈ ವರ್ಷದಿಂದಲೇ ತರಗತಿ ಆರಂಭವಾಗಲಿದ್ದು, 100 ಸರಕಾರಿ ಸೀಟುಗಳು ಲಭ್ಯವಿರಲಿದೆ. 4.6 ವರ್ಷದ ಕೋರ್ಸ್ ಇದಾಗಿದ್ದು, ಈಗಾಗಲೇ ಕಾಲೇಜಿನಲ್ಲಿ ನರ್ಸಿಂಗ್ ಆಫೀಸರ್, ಬೋಧಕ ಸಿಬ್ಬಂದಿಗಳಿದ್ದಾರೆ.

ಡಾ. ಕಾರ್ಯಪ್ಪ, ಡೀನ್ ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ

ಮಡಿಕೇರಿಯ ವೈದ್ಯಕೀಯ ಕಾಲೇಜಿನಲ್ಲಿ ಬಿಎಎಸ್ಸಿ ನರ್ಸಿಂಗ್ ಕೋರ್ಸ್ ಆರಂಭಿಸುವಂತೆ ಕಳೆದ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಇದೀಗ ಸರ್ಕಾರದಿಂದ ಅನುಮತಿ ದೊರೆತ್ತಿದ್ದು, ಈ ವರ್ಷವೇ ತರಗತಿ ಆರಂಭವಾಗಲಿದೆ. ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳ ಸಭೆ ಕರೆದು ತರಗತಿಗಳನ್ನು ಎಲ್ಲಿ ನಡೆಸಬೇಕೆಂಬ ಬಗ್ಗೆ ನಿರ್ಧಾರ ಮಾಡಲಾಗುತ್ತದೆ.
ಅಪ್ಪಚ್ಚು ರಂಜನ್ ಶಾಸಕರು, ಮಡಿಕೇರಿ ಕ್ಷೇತ್ರ

ಈ ಹಿಂದೆ ಕೊಡಗಿಗೆ ಆರೋಗ್ಯ ಸಚಿವರು ಭೇಟಿ ನೀಡಿದ್ದ ಸಂದರ್ಭ ಕೊಡಗು ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ ಬಿಎಸ್ಸಿ ನರ್ಸಿಂಗ್ ಕೋರ್ಸ್ ಆರಂಭಿಸುವಂತೆ ಮನವಿ ಸಲ್ಲಿಸಲಾಗಿತ್ತು. ಮಾತ್ರವಲ್ಲದೆ ಮುಖ್ಯಮಂತ್ರಿಗಳಿಗವೀ ಕುರಿತು ಮನವಿ ಮಾಡಿದ್ದೆವು. ಇದೀಗ ಸರ್ಕಾರದಿಂದ ನರ್ಸಿಂಗ್ ಕೋರ್ಸ್ ಆರಂಭಕ್ಕೆ ಅನುಮತಿ ದೊರೆತಿದೆ. ಸದ್ಯದಲ್ಲಿಯೇ ತರಗತಿಗಳು ಆರಂಭವಾಗಲಿದೆ.

ಕೆ.ಜಿ. ಬೋಪಯ್ಯ,
ಶಾಸಕರು ವಿರಾಜಪೇಟೆ ಕ್ಷೇತ್ರ

error: Content is protected !!