ಕೂಡುಮಂಗಳೂರು ಗ್ರಾ.ಪಂ ಪ್ರಥಮ ಮಾಸಿಕ ಸಭೆ: ನೂತನ ಸದಸ್ಯರಿಂದ ಊರಿನ ಅಭಿವೃದ್ಧಿ ಬಗ್ಗೆ ಚರ್ಚೆ

19/02/2021

ಕುಶಾಲನಗರ,ಫೆ. ೧೯ : ಕೂಡುಮಂಗಳೂರು ಗ್ರಾ.ಪಂ ನ ಪ್ರಥಮ ಮಾಸಿಕ ಸಭೆಯು, ಗ್ರಾ.ಪಂ ಅಧ್ಯಕ್ಷೆ ಇಂದಿರಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಕೂಡುಮಂಗಳೂರು ಗ್ರಾ.ಪಂ ಗೆ‌ ಸಾರ್ವಜನಿಕರು ನೀಡಿದ್ದ ಅರ್ಜಿಗಳನ್ನು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಂಡಿಸಿದರು. ಕೂಡುಮಂಗಳೂರು ಗ್ರಾ.ಪಂ ನ ಆನೆಕೆರೆಗೆ ಸಂಬಂಧಿಸಿದಂತೆ ಮಾತನಾಡಿದ ಹಿರಿಯ ಸದಸ್ಯೆ ಫಿಲೋಮಿನಾ, ಆನೆಕೆರೆ ಜಾಗವನ್ನು ಮರು ಸರ್ವೆ ನಡೆಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ದಿನೇಶ್ ಅವರು, ಈಗಾಗಲೇ ಆನೆಕೆರೆ ಜಾಗ ಮೂರು ಭಾರಿ ಸರ್ವೆ ನಡೆಸಲಾಗಿದೆ. ಆದ ಕಾರಣ ಮರುಸರ್ವೆ ಕಾರ್ಯ ಮುಂದಾಗಿ ಸಮಯ ವ್ಯರ್ಥ ಮಾಡದೇ, ಕಲ್ಲನ್ನು ನೆಟ್ಟು ಗಡಿಗುರುತು ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಸದಸ್ಯ ಮಣಿರವರು ಸಾತ್ ನೀಡಿದರು. ನಂತರ ಸದಸ್ಯೆ ಫಿಲೋಮಿನಾರವರು ಸರ್ವೇ ಆಗಲೇ ಬೇಕು ಎಂದು ಪಟ್ಟು ಹಿಡಿದರು. ನಂತರ ಸಭೆಯಲ್ಲಿ ಮರು ಸರ್ವೆ ನಡೆಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಕೂಡುಮಂಗಳೂರು ಬಸವೇಶ್ವರ ಬಡಾವಣೆಯಲ್ಲಿ ನೂತನ ಲೇಔಟ್ ನಿರ್ಮಾಣಕ್ಕೆ ಪಂಚಾಯಿತಿ ಅನುಮತಿ ನೀಡುವ ಬಗ್ಗೆ ಚರ್ಚಿಸಲಾಯಿತು. ಇದಕ್ಕೆ ಸದಸ್ಯರಾದ ಗಿರೀಶ್ ಹಾಗೂ ಚಂದ್ರರವರು, ಜಾಗವು ಭೂ ಪರಿವರ್ತನೆ ಆದ ಕಾರಣ ಅನುಮತಿ ನೀಡುವಂತೆ ತಿಳಿಸಿದರು. ಈ ಬಗ್ಗೆ ಮಾತನಾಡಿದ ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡುವ ಮುನ್ನ ಸ್ಥಳ ಪರಿಶೀಲನೆ ಮಾಡಬೇಕು. ಈ ಸ್ಥಳದಲ್ಲಿ ಪೈಸಾರಿ ಜಾಗವಿರುವ ಬಗ್ಗೆ ಹಾಗೂ ಲೇಔಟ್ ಪ್ಲಾನ್‌ ಅಲ್ಲಿ ಸರ್ಕಾರಿ ರಸ್ತೆಯನ್ನು ಸೇರ್ಪಡೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಆದ್ದರಿಂದ ಸ್ಥಳ ಪರಿಶೀಲನೆ ನಡೆಸಿದ ನಂತರ ಯಾವುದೇ ತೀರ್ಮಾನವನ್ನು ಕೈಗೊಳ್ಳಬೇಕು. ಪೈಸಾರಿ ಜಾಗ ಒತ್ತುವರಿಯಾಗಿರುವುದು ಕಂಡು ಬಂದಲ್ಲಿ ಅದ್ದುಬಸ್ತು ಸರ್ವೇ ನಡೆಸಲು ಒತ್ತಾಯಿಸಿದರು. ಇದಕ್ಕೆ ಸದಸ್ಯೆ ಫಿಲೋಮಿನಾರವರು ಧ್ವನಿಗೂಡಿಸಿದರು‌. ಸಭೆಯಲ್ಲಿ ಸ್ಥಳ ಪರಿಶೀಲನೆ ನಡೆಸಲು ನಿರ್ಣಯಿಸಲಾಯಿತು.
ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಪೈಸಾರಿ ಜಾಗವನ್ನು ಪತ್ತೇ ಹಚ್ಚಿ, ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಎಂದು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಯಿತು. ಹಿರಿಯ ಸದಸ್ಯರಾದ ಬೋಗಪ್ಪರವರು ಮಾತನಾಡಿ, ಚಿಕ್ಕತ್ತೂರು ಹಾಗೂ ಸುಂದರನಗರದಲ್ಲಿ ಪೈಸಾರಿ ಜಾಗವಿರುವ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಸದಸ್ಯರಾದ ಆಶಾ ವೆಂಕಟೇಶ್, ಕೆ.ಬಿ.ಶಂಶುದ್ಧೀನ್, ದಿನೇಶ್, ಮಣಿ ಹಾಗೂ ಇನ್ನಿತರರು ಸಹಮತ ವ್ಯಕ್ತಪಡಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಗಿರೀಶ್ ಅವರು ಮನವಿ ಮಾಡಿಕೊಂಡರು. ಇದಕ್ಕೆ ಉತ್ತರಿಸಿದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ, ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಲು ಅವಕಾಶವಿಲ್ಲ ಎಂದರು.
ಬೀದಿ ನಾಯಿಗಳ ಸಮಸ್ಯೆಯಿಂದ ಸಾರ್ವಜನಿಕರು ಹೈರಾಣಾಗಿದ್ದು, ಕೂಡಲೇ ಪಂಚಾಯಿತಿ ವತಿಯಿಂದ ಕ್ರಮ ಕೈಗೊಳ್ಳಬೇಕು ಎಂದು ಕೆ.ಬಿ.ಶಂಶುದ್ಧೀನ್ ಒತ್ತಾಯಿಸಿದರು. ಇದಕ್ಕೆ ಸದಸ್ಯರಾದ ದಿನೇಶ್, ಮಂಜು, ಗಿರೀಶ್ ಧ್ವನಿಗೂಡಿಸಿದರು‌. ಆಯಾ ವರ್ಡ್ ಸದಸ್ಯರ ಸಮ್ಮುಖದಲ್ಲಿ ಬೀದಿ ನಾಯಿಗಳನ್ನು ಅರಣ್ಯಕ್ಕೆ ಬಿಡಲು ತೀರ್ಮಾನಿಸಲಾಯಿತು.
ನಂತರ ಸಭೆಯಲ್ಲಿ ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ಚರ್ಚೆಗಳು ನಡೆದವು.
ಕಳೆದ ವರ್ಷದ ಕ್ರಿಯಾಯೋಜನಾ ಪಟ್ಟಿಯನ್ನು ಪಿಡಿಓ ಸಂತೋಷ್ ಅವರು ಸಭೆಯಲ್ಲಿ ಮಂಡಿಸಿದರು.
ಈ ಸಂದರ್ಭ ಕೂಡುಮಂಗಳೂರು ಗ್ರಾ‌.ಪಂ ಸದಸ್ಯರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.