ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ : ಯುವ ಜನರು ರಾಷ್ಟ್ರದ ಆಸ್ತಿ : ಶಾಸಕ ಅಪ್ಪಚ್ಚು ರಂಜನ್

February 19, 2021

ಮಡಿಕೇರಿ ಫೆ.19 : ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಹಿತ್ಯ, ಸಂಗೀತ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಹೇಳಿದರು.
ನಗರದ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನ ಸಮಾರಂಭ ಹಾಗೂ ಪ್ರಥಮ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯುವ ಜನರು ದೇಶದ ಆಸ್ತಿಯಾಗಿದ್ದು, ಸಮಾಜದಲ್ಲಿ ಪರಿವರ್ತನೆ ಕಾಣಲು ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಪಡೆಯಬೇಕು. ಆ ದಿಸೆಯಲ್ಲಿ ಅಧ್ಯಯನ ಅಗತ್ಯ ಎಂದು ಅಪ್ಪಚ್ಚು ರಂಜನ್ ಅವರು ಪ್ರತಿಪಾದಿಸಿದರು.
ವಿದ್ಯಾರ್ಥಿಗಳಲ್ಲಿ ಭವಿಷ್ಯದ ಬಗ್ಗೆ ಚಿಂತನೆ ಇರಬೇಕು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವ ಬಗ್ಗೆ ಹಠ, ಛಲ ಇರಬೇಕು. ಭವಿಷ್ಯವನ್ನು ಉತ್ತಮಪಡಿಸಿಕೊಳ್ಳಲು ಶ್ರಮಿಸಬೇಕು. ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಇರಬೇಕು ಎಂದು ಅವರು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಹಣವಿದೆ. ಆದರೆ ಜಾಗ ಇನ್ನೂ ಅಂತಿಮಗೊಂಡಿಲ್ಲ. ಆದ್ದರಿಂದ ಉನ್ನತ ಶಿಕ್ಷಣ ಸಚಿವರ ಜೊತೆ ಚರ್ಚಿಸಲಾಗಿದ್ದು, ಸದ್ಯದಲ್ಲೇ ಜಾಗ ದೊರೆಯಲಿದ್ದು, ಕಾಲೇಜು ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.
ಆರೋಗ್ಯ ಕಡೆ ಗಮನಹರಿಸುವಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ಪಾಲಿಸಬೇಕು. ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಶಾಸಕರು ಹೇಳಿದರು.
ಶನಿವಾರಸಂತೆಯ ಶ್ರೀ ವಿಘ್ನೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಕೆ.ಪಿ.ಜಯಕುಮಾರ್ ಅವರು ಮಾತನಾಡಿ ನಾವು ಆಡುವ ಮಾತು ಕಲೆಯಾಗಬೇಕೇ ಹೊರತು, ಮತ್ತೊಬ್ಬರನ್ನು ನೋಯಿಸಬಾರದು ಎಂದರು.
ವಿದ್ಯೆಯೇ ಮುಖ್ಯ ಗುರಿಯಾಗಿರಬೇಕು. ಸಮಾಜದಲ್ಲಿ ಒಬ್ಬ ವ್ಯಕ್ತಿಯು ಇತರರೊಡನೆ ಕೂಡಿ ಬಾಳುವ ಸೌಹಾರ್ದತೆ ಬೆಳೆಸಿಕೊಳ್ಳಬೇಕು. ಪಠ್ಯ ಜತೆಗೆ ಪಠ್ಯೇತರ ಕ್ರೀಡೆ, ಎನ್‍ಸಿಸಿ, ಎನ್‍ಎಸ್‍ಎಸ್ ಮತ್ತಿತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿ ಜೀವನವು ಛಲವನ್ನು ಹೊಂದಿರುವ ಬಹುದೊಡ್ಡ ಘಟ್ಟವಾಗಿದೆ. ಆತ್ಮವಿಶ್ವಾಸ, ಶ್ರದ್ದೆ, ಗೌರವದಿಂದ ಇದ್ದಲ್ಲಿ ಜೀವನವು ಅರ್ಥಪೂರ್ಣವಾಗಿರುತ್ತದೆ ಮತ್ತು ವಿದ್ಯಾರ್ಥಿ ಜೀವನವು ಖಾಲಿ ಪುಸ್ತಕ ಇದ್ದಂತೆ, ಅಲ್ಲಿ ನಾವು ಏನು ಬರೆಯದಿದ್ದಲ್ಲಿ ಇನ್ನು ಯಾರೋ ಆ ಖಾಲಿ ಹಾಳೆಯಲ್ಲಿ ಬರೆಯುವಂತಾಗುತ್ತದೆ. ಆ ಸಂದರ್ಭದಲ್ಲಿ ನಮ್ಮ ಜೀವನವನ್ನು ಅವರೇ ನಡೆಸುವಂತಾಗುತ್ತದೆ ಎಂದು ಅವರು ನುಡಿದರು.
ಯಾವ ವಿದ್ಯಾರ್ಥಿ ತಮ್ಮ ಪೋಷಕರಿಗೆ ಗೌರವ ನೀಡುತ್ತಾರೋ ಅವರು ಮುಂದೊಂದು ದಿನ ಬಹುದೊಡ್ಡ ವ್ಯಕ್ತಿಯಾಗಿ ರೂಪುಗೊಳ್ಳುತ್ತಾರೆ. ಪ್ರತಿಯೊಂದು ವಿದ್ಯಾರ್ಥಿಗಳಿಗೂ ಗುರಿ ಇರಬೇಕು. ಆಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ ಎಂದು ಹೇಳಿದರು.
ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಡಾ.ಶಶಿಧರ ಅವರು ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕøತಿಕವಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ಕ್ರೀಯಾಶೀಲತೆಗೆ ಸಹಕಾರಿಯಾಗಲಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಚಿತ್ರ ವೈ, ಅರ್ಥಶಾಸ್ರ ಪ್ರಾಧ್ಯಾಪಕರಾದ ಕೆ.ಸಿ.ದಯಾನಂದ ಮತ್ತಿತರರು ಇದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಶಿವ ಪ್ರಾರ್ಥಿಸಿದರು. ನಜ್ರಿಯಾ ನಿರೂಪಿಸಿದರು. ಜುಬೇರಿಯಾ ಸ್ವಾಗತಿಸಿದರು. ಪೂಜಾ ಮೇರಿ ವಂದಿಸಿದರು.

error: Content is protected !!