ಮಾಲ್ದಾರೆಯ ಬಡ ಕುಟುಂಬಕ್ಕೆ ಮನೆ ಹಸ್ತಾಂತರ : ಕೆಎಸ್ ಡಬ್ಲ್ಯು ಎ ಗಲ್ಫ್ ಸಮಿತಿಯಿಂದ ನೆರವು

19/02/2021

ಸಿದ್ದಾಪುರ ಫೆ.19 : ಗಲ್ಫ್ ರಾಷ್ಟ್ರದಿಂದ ಹಿಂತಿರುಗಿದ ನಂತರ ಹೃದಯಾಘಾತದಿಂದ ನಿಧನರಾದ ಗರಗಂದೂರಿನ ಹನೀಫ್ ಅವರ ಬಡ ಕುಟುಂಬಕ್ಕೆ ಕೆಎಸ್ ಡಬ್ಲ್ಯು ಎ ಗಲ್ಫ್ ಸಮಿತಿ ಆಶ್ರಯದ ನೆರವು ನೀಡಿದೆ.
ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾಮದಲ್ಲಿ ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆಯೊಂದನ್ನು ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದೆ.
ಕೊಡಗು ಜಿಲ್ಲಾ ಉಪ ಖಾಝಿ ಮಹಮೂದ್ ಉಸ್ತಾದ್ ಎಡಪ್ಪಾಲಂ ದಾರುಲ್ ಖೈರ್ ಮನೆಯ ಕೀಯನ್ನು ಕುಟುಂಬದ ಮಕ್ಕಳಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವ ಮೂಲಕ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಮಿತಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ (ಜಿ.ಸಿ.ಸಿ ಗಲ್ಫ್ )ಸಮಿತಿಯ ಸೇವಾ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದರು.
ಪ್ರಮುಖರಾದ ಸೈಯದ್ ಮಹದಿ ತಂಙಳ್, ಸೈಯದ್ ಅಬ್ದುಲ್ ಖಾದರ್ ಅಲ್ ಬುಖಾರಿ, ಅಶ್ರಫ್ ಅಹ್ಸನಿ, ಅಲಿ ಮುಸ್ಲಿಯಾರ್, ಹಫೀಳ್ ಸಅದಿ ಕೊಳಕೇರಿ, ಇಸ್ಮಾಯಿಲ್ ಸಖಾಫಿ, ಅಬ್ದುಲ್ಲಾ ಸಖಾಫಿ, ಶಾಫಿ ಸಹದಿ, ಮುಸ್ತಫಾ ಸಖಾಫಿ, ಅಬೂಬಕ್ಕರ್ ಹಾಜಿ ಮೊಯಿದಿನ್, ಇಸ್ಮಾಯಿಲ್, ಹನೀಫ್, ಅಬೀದ್ ಕಂಡಕೆರೆ ಸೇರಿದಂತೆ ಮತ್ತಿತರರು ಹಾಜರಿದ್ದರು.