ಈಶ್ವರ ಬೈತೂರಪ್ಪನಿಗೆ ಬೈಮನ ಕುಟುಂಸ್ಥರಿಂದ ದವಸ : ಕೊಟ್ಟೂರು ಗ್ರಾಮದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಸಾಂಪ್ರದಾಯಿಕ ಹಬ್ಬ

ಮಡಿಕೇರಿ ಫೆ. 19 : ಚೇರಂಬಾಣೆ ಸಮೀಪ ಕೊಟ್ಟೂರ್ ಗ್ರಾಮದ ಬೈಮನ ಕುಟುಂಬಸ್ಥರು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಎತ್ತು ಪೊರಾಟ್ ಹಬ್ಬವನ್ನು ಈ ಬಾರಿಯೂ ನೂರಾರು ಕುಟುಂಬಸ್ಥರ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಕೊಟ್ಟೂರಿನ ಐನ್ ಮನೆಯಲ್ಲಿ ಬೈಮನ ಕುಟುಂಬಸ್ಥರೆಲ್ಲ ಸೇರಿ ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸಿದರು.
ಈ ಸಂದರ್ಭ ಕುಟುಂಬದ ಹಿರಿಯರಾದ ಬೈಮನ ತಿಮ್ಮಯ್ಯ ಮಾತನಾಡಿ ಎತ್ತು ಪೊರಾಟ್ ಹಬ್ಬದ ಹಿನ್ನೆಲೆಯನ್ನು ವಿವರಿಸಿದರು.
ಸುಮಾರು 350 ವರ್ಷಗಳ ಹಿಂದೆ ಕೇರಳದ ಕಣ್ಣೂರಿನ ಹಲವು ಭಾಗಗಳಲ್ಲಿ ಬರಗಾಲ ಬಂದು ಜನರು ತತ್ತರಿಸಿ ಹೋಗಿದ್ದರು. ಅಲ್ಲಿನ ಹಿರಿಯರು ಬಂದು ಕೊಡಗಿನ ಲಿಂಗರಾಜನಲ್ಲಿ ಕೇರಳದ ದೇವಾಲಯಕ್ಕೆ ಅಂದರೆ ಇಂದಿನ ಪಯ್ಯೂರಿನ ಈಶ್ವರ ಬೈತೂರಪ್ಪ ದೇವಸ್ಥಾನಕ್ಕೆ ಒಂದು ವರ್ಷಕ್ಕೆ ಬೇಕಾಗುವಷ್ಟು ದವಸ ಧಾನ್ಯಗಳನ್ನು ನೈವೇದ್ಯಕ್ಕೆ ನೀಡುವಂತೆ ಕೋರಿಕೊಳ್ಳುತ್ತಾರೆ.
ಅದಕ್ಕೆ ಲಿಂಗರಾಜನು ನೀನು ನನ್ನ ಹತ್ತಿರ ಕೇಳಿ ಏನು ಪ್ರಯೋಜನವಿಲ್ಲ ತಲಕಾವೇರಿ ಭಾಗಕ್ಕೆ ಹೋಗಿ ಅಲ್ಲಿ ನೆಲೆಸಿರುವ ಕಾವೇರಿ ಮಾತೆಯನ್ನು ಕೇಳು ಎಂದು ಕಳುಹಿಸಿಬಿಡುತ್ತಾನೆ.
ಹಿರಿಯರು ತಲಕಾವೇರಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ ಚೇರಂಬಾಣೆ ಸಮೀಪ ಬೈಮನ ಮನೆಯ ಮಹಿಳೆಯೊಬ್ಬಳು ಎದುರಾಗುತ್ತಾಳೆ. ಆ ಮಹಿಳೆ ಹಿರಿಯರಿಗೆ ಭಕ್ತಿಯಿಂದ ನಮಸ್ಕರಿಸಿ, ಬಂದ ಕಾರಣವನ್ನು ಕೇಳಿ ತಿಳಿದುಕೊಳ್ಳುತ್ತಾಳೆ.
ಆಗ ಆ ಮಹಿಳೆ ತಮ್ಮ ಕುಟುಂಬದಲ್ಲಿ ಎಲ್ಲಾ ಹೆಣ್ಣು ಮಕ್ಕಳೇ ಇದ್ದಾರೆ, ಗಂಡು ದಿಕ್ಕು ಯಾರಿಲ್ಲವೆಂದು ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಾಳೆ. ನಿಮ್ಮ ಕುಟುಂಬವು ಪ್ರತಿವರ್ಷ ಈಶ್ವರ ಬೈತೂರಪ್ಪನಿಗೆ ದವಸಗಳನ್ನು ನೀಡಿದ್ದಲ್ಲಿ ನಿಮ್ಮ ಆಸೆ ಈಡೇರುವುದೆಂದು ಹಿರಿಯರು ಭರವಸೆ ನೀಡುತ್ತಾರೆ. ಆಗ ಆ ಮಹಿಳೆಯು ಹಿರಿಯರನ್ನು ತಮ್ಮ ಮನೆಗೆ ಬರಮಾಡಿಕೊಂಡು ದೇವಸ್ಥಾನಕ್ಕೆ ಒಂದು ವರ್ಷಕ್ಕೆ ಬೇಕಾಗುವಷ್ಟು ಅಕ್ಕಿಯನ್ನು ತಲುಪಿಸುವುದಾಗಿ ಭರವಸೆ ನೀಡುತ್ತಾಳೆ. ಆ ನಂತರದ ದಿನಗಳಲ್ಲಿ ಗ್ರಾಮದ ಪ್ರತಿ ದಂಪತಿಗಳಿಗೆ ಗಂಡು ಮಕ್ಕಳ ಜನನ ಹೆಚ್ಚಾಯಿತು ಎಂದು ಹೇಳಲಾಗುತ್ತಿದೆ.
ಪ್ರತಿವರ್ಷ ಕುಟುಂಬಸ್ಥರು ತಮ್ಮ ಗದ್ದೆಯಲ್ಲಿ ಬೆಳೆದ ದವಸ ಧಾನ್ಯಗಳನ್ನು ಸಂಗ್ರಹಿಸಿ ಆರು ಎತ್ತುಗಳಲ್ಲಿ ಬೈಮನ ಮನೆಗೆ ತಂದು ಪೂಜೆ ಸಲ್ಲಿಸಿ ನಂತರ ಕೇರಳದಿಂದ ಆಗಮಿಸುವ ಹಿರಿಯರ ಅಣತಿಯಂತೆ ದೇವಾಲಯಕ್ಕೆ ಸಾಗಿಸುತ್ತಾರೆ.
ಬೈಮನ ಕುಟುಂಬಸ್ಥರೆಲ್ಲ ಸೇರಿ ತಮ್ಮ ಐನ್ ಮನೆಯಲ್ಲಿ ಪೂಜೆ ಸಲ್ಲಿಸಿ ಕಾಲ್ನಡಿಗೆಯಲ್ಲಿ ನಾಪೋಕ್ಲು ಚೋಮಕುಂದ್ ಮಾರ್ಗವಾಗಿ ಪಯ್ಯುರಿಗೆ ಹೊರಡುತ್ತಾರೆ. ದೇವಸ್ಥಾನದಲ್ಲಿ ಬೈಮನ ಕುಟುಂಬದವರಿಗೆ ವಿಶೇಷ ಸ್ಥಾನಮಾನವಿದೆ.