ಸರ್ವಜ್ಞ ಜಯಂತಿಯಲ್ಲಿ ಜನಾಂಗದ ನಿರ್ಲಕ್ಷ್ಯ : ಕೊಡಗು ಕುಲಾಲ ಕುಂಬಾರರ ಸಮಾಜ ಆರೋಪ

February 20, 2021

ಮಡಿಕೇರಿ ಫೆ.20 : ಜಿಲ್ಲಾಡಳಿತದ ವತಿಯಿಂದ ಇಂದು ನಡೆದ ಸರ್ವಜ್ಞ ಜಯಂತಿಯ ಬಗ್ಗೆ ಕುಲಾಲ ಕುಂಬಾರರ ಸಮಾಜಕ್ಕೆ ಯಾವುದೇ ಮಾಹಿತಿಯನ್ನು ನೀಡದೆ ನಿರ್ಲಕ್ಷಿಸಲಾಗಿದೆ ಎಂದು ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಮಾಜದ ಅಧ್ಯಕ್ಷ ಎಂ.ಡಿ.ನಾಣಯ್ಯ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರತಿವರ್ಷ ಕುಲಾಲ ಕುಂಬಾರರ ಸಮಾಜದ ಪ್ರಮುಖರನ್ನು ಸರ್ವಜ್ಞ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿತ್ತು. ಆದರೆ ಈ ಬಾರಿ ಕಾರ್ಯಕ್ರಮದ ಯಾವುದೇ ಮಾಹಿತಿಯನ್ನು ನೀಡದೆ ಕಾಟಾಚಾರಕ್ಕೆ ಜಯಂತಿ ಆಚರಣೆ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.
ಅಧಿಕಾರಿಗಳು ಕೋವಿಡ್ ನಿಯಮಾವಳಿಯ ಕಾರಣ ನೀಡಿ ನುಣುಚಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜನಜಂಗುಳಿಯ ಎಷ್ಟೋ ಕಾರ್ಯಕ್ರಮಗಳು ನಡೆದಿವೆ. ಆದರೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿರುವ ಸರ್ವಜ್ಞರ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿರುವ ನಾಣಯ್ಯ, ಜಿಲ್ಲೆಯಲ್ಲಿರುವ 5 ಸಾವಿರಕ್ಕೂ ಅಧಿಕ ಮಂದಿ ಕುಲಾಲ ಕುಂಬಾರರ ಸಮಾಜದವರನ್ನು ಕಡೆಗಣಿಸಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಾಜಕ್ಕೆ ಆದರ್ಶವಾಗಿರುವ ವ್ಯಕ್ತಿಗಳ ಜಯಂತಿಯನ್ನು ಮುಂದಿನ ಪೀಳಿಗೆಗೆ ಸ್ಫೂರ್ತಿ ತುಂಬುವುದಕ್ಕಾಗಿ ಅರ್ಥಪೂರ್ಣವಾಗಿ ಆಚರಿಸಬೇಕಾಗುತ್ತದೆ. ಕೇವಲ ನಾಲ್ಕು ಗೋಡೆಗಳ ಮಧ್ಯೆ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗಷ್ಟೇ ಸೀಮಿತವಾಗಿ ಜಯಂತಿಗಳನ್ನು ಆಚರಿಸಬಾರದು ಎಂದು ನಾಣಯ್ಯ ಒತ್ತಾಯಿಸಿದ್ದಾರೆ.

error: Content is protected !!