ಮುಂಡಾಸುರನನ್ನು ಸಂಹರಿಸಿದ ಪುಣ್ಯ ಕ್ಷೇತ್ರ ಮುಂಡ್ಕೂರು

February 20, 2021

ಮುಂಡಾಸುರನನ್ನು ಶ್ರೀ ದುರ್ಗಾಪರಮೇಶ್ವರಿ ಸಂಹರಿಸಿದ ಪುಣ್ಯ ಕ್ಷೇತ್ರ ಮುಂಡ್ಕೂರು ಎಂದು ಪ್ರಸಿದ್ಧಿ ಪಡೆದಿದೆ. ಸ್ಥಳ ಪುರಾಣ ಅರಿತ ಭಾರ್ಗವ ಋಷಿಗಳು ಸುರಥ ರಾಜನಿಂದ ಈ ಪುಣ್ಯ ಸ್ಥಳದಲ್ಲಿ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಿಯ ವಿಗ್ರಹವನ್ನು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಿದರು. ಕಾಲಕ್ರಮೇಣ ಜೈನ ವಂಶದ ವೀರವರ್ಮ ಎಂಬ ರಾಜನ ಆಳ್ವಿಕೆಯ ಸಂಧರ್ಭದಲ್ಲಿ ಮಂಜಪ್ಪ ಅಜ್ರಿ ಎಂಬ ದುಷ್ಟ ಮಂತ್ರಿಯ ದುರುಪದೇಶ ರಾಜ್ಯಾದ್ಯಂತ ಅನ್ಯಾಯ, ಅಕ್ರಮ, ಅರಾಜಕತೆಗಳು ತಾಂಡವವಾಡ ತೊಡಗಿದವು. ಶಾಂಭವಿ ನದಿಯ ಪಶ್ಚಿಮದಲ್ಲಿರುವ ಉಳೆಪಾಡಿ ಗ್ರಾಮದ ಗುಡ್ಡೆಸಾನ ಎಂಬಲ್ಲಿ ದೈವಾಂಶ ಸಂಭೂತರಾದ ಕಾಂತ ಬಾರೆ ಬೂದ ಬಾರೆ ಎಂಬ ವೀರ ಸಹೋದರರಿದ್ದರು. ಪ್ರತಿನಿತ್ಯ ಅವರು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಮಾಡಿ ಪ್ರಸಾದ ಸ್ವೀಕರಿಸುವ ನಿತ್ಯ ಚರ್ಯೆಯನ್ನು ಇಟ್ಟುಕೊಂಡಿದ್ದರು.

ವೀರ ವರ್ಮ ರಾಜನಿಗೆ ಇವರ ನಿತ್ಯದ ಕಾರ್ಯಕ್ರಮವನ್ನು ಆತನ ಸಹಚರರಾಗಿದ್ದ ಶಿವಪ್ಪ ಮುಂಗ್ಲಿ, ಸಿದ್ದಪ್ಪ ಮುಂಗ್ಲಿ ಎಂಬ ಸಹೋದರರು ತಿಳಿಸಿದಾಗ ನೆರೆಯ ಸಂದರ್ಭದಲ್ಲಿ ದೋಣಿಯವರಿಗೆ ಬಾರೆ ಸಹೋದರರನ್ನು ಶಾಂಭವಿ ನದಿ ದಾಟಿಸಬಾರದೆಂದು ಕಟ್ಟಪ್ಪಣೆ ಮಾಡಿಸಿದನಂತೆ. ನದಿ ದಟದಲ್ಲಿ ಶ್ರೀ ದೇವಿಯನ್ನು ಮನಸಾರೆ ಧ್ಯಾನಿಸಲು ನದಿಯು ಇಬ್ಭಾಗವಾಗಿ ಬಾರೆಯರಿಗೆ ಶ್ರೀ ಮುಂಡ್ಕೂರಿಗೆ ಬರಲು ದಾರಿ ಮಾಡಿಕೊಟ್ಟಿತಂತೆ. ಇದನ್ನರಿತ ವೀರ ವರ್ಮನು ಸ್ಥಳೀಯ ಅರ್ಚಕರು, ತಂತ್ರಿಗಳು ಒಪ್ಪದಿರುವಾಗ ಕೇರಳದಿಂದ ಮಾಂತ್ರಿಕನನ್ನು ಬರಮಾಡಿಸಿ ಶ್ರೀ ದೇವಿಯ ಸಾನಿಧ್ಯವನ್ನು ಕುಗ್ಗಿಸಿ ಶ್ರೀ ಕ್ಷೇತ್ರದ ರಕ್ಷಕರಾಗಿದ್ದ ಧೂಮವತಿ, ರಕ್ತೇಶರಿ ದೈವಗಳನ್ನು ಸ್ತಂಭನಗೊಳಿಸಿ ಪಶ್ಚಿಮಾಭಿಮುಖವಿದ್ದ ಶ್ರೀ ದೇವಿಯ ಮೂಲಬಿಂಬವನ್ನು ಪೂರ್ವಾಭಿಮುಖವಾಗಿ ತಿರುಗಿಸಿ ಬಿಂಬದ ಅಡಿಯಲ್ಲಿದ್ದ ಮುತ್ತುರತ್ನಾದಿ ಅಮೂಲ್ಯ ಆಭರಣಗಳನ್ನು ದೋಚಿದನಂತೆ, ಇದರಿಂದಾಗಿ ಮಾಂತ್ರಿಕನ ಕಣ್ಣು ಕುರುಡಾಯಿತಂತೆ. ಬಳಿಕ ಬಾರೆ ಸಹೋದರರಿಗೆ ಕಬ್ಬಿನ ಕಟ್ಟೋಂದನ್ನು ಒಂದೇ ಏಟಿಗೆ ಖಡ್ಗದಿಂದ ತುಂಡರಿಸುವ ಪಂಥಾಹ್ವಾನ ನೀಡಿ ಇದರಲ್ಲಿ ಗೆದ್ದರೆ ಒಬ್ಬನ್ ತೋಟವೆಂಬ ಫಲಭರಿತ ತೆಂಗಿನ ತೋಟವನ್ನು ಪಣವಾಗಿ ನೀಡುವುದಾಗೆ ಘೋಷಿಸಿದನು. ಬಾರೆಯರಿಗೆ ವೀರ ವರ್ಮನ ಕೃತ್ಯ ಅರಿವಾಗಿ ಶ್ರೀ ದೇವಿಯನ್ನು ಪ್ರಾರ್ಥಿಸಲು, ಕಲ್ಲಕಂಡ ಎಂಬ ಜಾಗದಲ್ಲಿ ಹರಿತವಾದ ಖಡ್ಗವೊಂದನ್ನು ಶ್ರೀ ದೇವಿ ಪ್ರಸಾದಿಸಿದಳಂತೆ. ಆ ಖಡ್ಗದಿಂದ ಕಬ್ಬಿನದ ಕಟ್ಟನ್ನು ಒಂದೇ ಏಟಿಗೆ ತುಂಡರಿಸಲು ಅದರೊಳಗಿದ್ದ ಕಬ್ಬಿಣದ ಸರಳುಗಳು ತುಂಡಾಗಿ ಬಿದ್ದವಂತೆ. ಪಣದಂತೆ ತೋಟವನ್ನು ಕೊಡಲೊಪ್ಪದ ವೀರ ವರ್ಮ, ಮಂಜಪ್ಪ ಅಜ್ರಿ, ಶಿವಪ್ಪ ಮುಂಗ್ಲಿ ಹಾಗೂ ಇತರ ದುಷ್ಟರನ್ನು ಶ್ರೀ ದೇವಿ ಇತ್ತ ಖಡ್ಗದಿಂದಲೇ ಸಂಹರಿಸಿ ಅರಾಜಕತೆಗೆ ಅಂತಿಮ ಹಾಡಿದರು. ಒಬ್ಬನ್ ತೋಟದಲ್ಲಿ ಕೈಯಿಂದಲೇ ಬಾವಿ ತೋಡಿ ನೀರನ್ನು ಸ್ವೀಕರಿಸಿದರಂತೆ, ಈ ಜಾಗ ಹಾಗೂ ಬಾವಿಯನ್ನು ಈಗಲೂ ಕಾಣಬಹುದು.

ಈ ತೆಂಗಿನ ತೋಟದಿಂದ ಬರುವ ಎಣ್ಣೆಯನ್ನು ಶ್ರೀ ದೇವಿಯ ನಂದಾದೀಪಕ್ಕೆ ವಿನಿಯೋಗಿಸಲು ತಿಳಿಸಿ ಮೂಡಬಿದಿರೆ ಚೌಟ ಅರಸರನ್ನು ಬರ ಮಾಡಿಸಿ ಇನ್ನಾ, ಮುಂಡ್ಕೂರು, ಮುಲ್ಲಡ್ಕ ಗ್ರಾಮಗಳ ಮೇಲ್ವಿಚಾರಣೆ ಮಾಡುವಂತೆಯೂ ಶ್ರೀ ದುರ್ಗಾಪರಮೇಶ್ವರಿ ದೇವಳದ ನಿತ್ಯ ನೈಮಿತ್ಯಾದಿಗಳನ್ನು ಸರಿಯಾಗಿ ಮಾಡಿಕೊಳ್ಳುವಂತೆ ತಿಳಿಸಿದರಂತೆ. ಅಂದಿನಿಂದ ಚೌಟರ ಸೀಮೆಗೆ ಸೇರಿದ ಶ್ರೀ ದೇವಳದ ಮೇಲ್ವಿಚಾರಣೆಗೆ ಭಾರ್ಗವ ಗೋತ್ರದ ಅಷ್ಟಕುಲ ಬ್ರಾಹ್ಮಣರು ಏಂಟು ಗುತ್ತು ನಾಲ್ಕು ಬಾಳಿಕೆ ನಾಲ್ಕು ಪರಾಡಿ ಹಾಗೂ ಇವರೆಲ್ಲರ ಮುಖ್ಯಸ್ಥರಾಗಿ ಮಡ್ಮಣ್ಣಾಯರನ್ನು ನೇಮಿಸಿದರಂತೆ. ಭಾರ್ಗವ ಗೋತ್ರದವರಿಗೆ ಮುಂಡ್ಕೂರು ಶ್ರೀ ದುರ್ಗೆ ಕುಲದೇವಿಯಾಗಿ ಆರಾಧಿಸಲ್ಪಡುತಿದ್ದಾಳ್ಳೆ.

ಮಾರ್ಗಸೂಚಿ :
ಮಂಗಳೂರು ತಾಲೂಕಿನ ಕಿನ್ನಿಗೋಳಿ ಸನಿಹ ಮೂರುಕಾವೇರಿಯಿಂದ ದಾಮಸ್ಕಟ್ಟೆ ಸಂಕಲಕರಿಯದ ಮೂಲಕ ಬೆಳ್ಮಣ್ಣುಗೆ ಹೋಗುವ ರಾಜ್ಯ ರಸ್ತೆಯಲ್ಲಿ ಮುಂಡ್ಕೂರು ಗ್ರಾಮವಿದೆ. ಮೂರುಕಾವೇರಿಗೆ ಮುಲ್ಕಿ, ಹಳೆಯಂಗಡಿ, ಕಿನ್ನಿಗೋಳಿ, ಮೂಡಬಿದ್ರೆ, ಕಟೀಲು ಕಡೆಗಳಿಂದ ಹೋಗಲು ರಸ್ತೆಗಳಿವೆ. ಹಾಗೆಯೇ, ಬೆಳ್ಮಣ್ಣುಗೆ ಪಡುಬಿದ್ರಿ (ಪಡ್ಡೆದ್ರ) , ಶಿರ್ವಾ, ನಿಟ್ಟೆ, ಕಾರ್ಕಳ (ಕಾರ್ಲ) ಕಡೆಗಳಿಂದ ಬರಲು ರಸ್ತೆಗಳಿವೆ.

ಕುಡಲ ಮಂಗಳೂರಿಂದ ಬರುವವರಿಗೆ (1) ಬಿಜೈ-(ಬೊಂದೆಲ್)- ಕಾವೂರು-ಬಜಪೆ- ಕಟೀಲ್-ಮೂರುಕಾವೇರಿ-ಮುಂಡ್ಕೂರು ಹತ್ತಿರದ ದಾರಿ. (2) ಪರ್ಯಾಯವಾಗಿ: ಕೂಳೂರು-ಹಳೆಯಂಗಡಿ-ಪಕ್ಷಿಕೆರೆ-ಕಿನ್ನಿಗೋಳಿ- ಮೂರುಕಾವೇರಿ-ಸಂಕಲಕರಿಯ-ಮುಂಡ್ಕೂರು ಇಲ್ಲವೆ (3) ನಂತೂರು- ಕುಲಶೇಖರ- ಕುಡುಪು-ವಾಮಂಜೂರು-ಗುರುಪುರ-ಕೈಕಂಬ- ಪೆರಾರ್- ಬಜಪೆ-ಕಟೀಲು-ಮೂರುಕಾವೇರಿ-ಮುಂಡ್ಕೂರು ರಸ್ತೆಯಿಂದ ಬರಬಹುದು.
ಉಡುಪಿಯಿಂದ ಬರುವವರಿಗೆ ಉಡುಪಿ- ಕಟಪಾಡಿ- ಶಿರ್ವಾ ಮಂಚಕಲ್- ಬೆಳ್ಮಣ್ಣು-ಮುಂಡ್ಕೂರು ಹತ್ತಿರದ ದಾರಿ.
ಕಾರ್ಕಳ (ಕಾರ್ಲ) ದಿಂದ ಬರುವವರಿಗೆ ಕಾರ್ಕಳ- ನಿಟ್ಟೆ-ಬೆಳ್ಮಣ್ಣು -ಮುಂಡ್ಕೂರು ಹತ್ತಿರದ ದಾರಿ.
ಮೂಡಬಿದ್ರಿ (ಬೆದ್ರ) ಇಂದ ಬರುವವರಿಗೆ ಮೂಡಬಿದ್ರಿ -ಅಲಂಗಾರು- ಪುತ್ತಿಗೆ- ಕೊಡ್ಯಡ್ಕ-ಕಡಂದಲೆ-ಪಾಲ್ಡಡ್ಕ-ಸಚ್ಚೇರಿಪೇಟೆ-ಮುಂಡ್ಕೂರು ಹತ್ತಿರದ ದಾರಿ. ಪರ್ಯಾಯವಾಗಿ (2)ಮೂಡಬಿದ್ರಿ- ಕಲ್ಲಮುಂಡ್ಕೂರು-ಮೂರುಕಾವೇರಿ-ಮುಂಡ್ಕೂರು, ಇಲ್ಲವೆ (3) ಮೂಡಬಿದ್ರಿ-ಮಿಜಾರು-ಗಂಜಿಮಠ-ಕೈಕಂಬ- ಬಜಪೆ-ಕಟೀಲು- ಮೂರುಕಾವೇರಿ-ಮುಂಡ್ಕೂರು ದಾರಿಯಿಂದ ಬರಬಹುದಾಗಿದೆ.