ಗೋಳಿಕಟ್ಟೆಯಲ್ಲಿ ಯಕ್ಷಗಾನ ಬಯಲಾಟ : ಶ್ರೀಮಂತ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವಾಬೇಕು : ತುಳು ಅಕಾಡೆಮಿ ಸದಸ್ಯ ಪಿಎಂ.ರವಿ ಕರೆ

February 20, 2021

ಮಡಿಕೇರಿ ಫೆ.20 : ಕನ್ನಡನಾಡಿನ ಶ್ರೀಮಂತ ಕಲೆಗಳಲ್ಲಿ ಯಕ್ಷಗಾನವೂ ಒಂದಾಗಿದ್ದು, ಇದನ್ನು ಉಳಿಸಿ, ಬೆಳೆಸುವ ಕಾರ್ಯ ನಿರಂತರವಾಗಿ ಆಗಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಪಿ.ಯು. ಸುಂದರ ಯಕ್ಷಗಾನ ಬಳಗದ ಸಹಕಾರದೊಂದಿಗೆ ವಿಶೇಷ ಘಟಕ ಯೋಜನೆಯಡಿಯಲ್ಲಿ ಮದೆ ಗ್ರಾಮದ ಗೋಳಿಕಟ್ಟೆ ಪುನರ್ವಸತಿ ಬಡಾವಣೆಯಲ್ಲಿ ನಡೆದ ಪೌರಣಿಕ ಯಕ್ಷಗಾನ ಬಯಲಾಟದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದೇಶಗಳಲ್ಲೂ ಯಕ್ಷಗಾನ ಕಲೆಗೆ ಮನಸೋತವರಿದ್ದು, ನಮ್ಮ ಕಲಾವಿದರು ಈ ವಿಶಿಷ್ಟ ಕಲೆಯನ್ನು ವಿಶ್ವಕ್ಕೇ ಪರಿಚಯಿಸುವ ಕಾರ್ಯ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲೂ ಯಕ್ಷಗಾನ ಹೆಚ್ಚು ಹೆಚ್ಚು ಪ್ರದರ್ಶನ ಕಾಣಬೇಕು ಮತ್ತು ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ನ ಅತಿಯಾದ ಬಳಕೆಯಿಂದ ಯಕ್ಷಗಾನದಂತಹ ಕಲೆಯನ್ನು ಪ್ರತ್ಯಕ್ಷವಾಗಿ ನೋಡಿ ಆನಂದಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲೆಯ ಅನೇಕ ಕಲಾವಿದರು ಕಲೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಕೋವಿಡ್ ಕಾರಣದಿಂದ ಕಾರ್ಯಕ್ರಮಗಳು ನಡೆಯದೆ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸರ್ಕಾರ ಕಲಾವಿದರ ನೆರವಿಗೆ ಬರಬೇಕೆಂದು ರವಿ ಮನವಿ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿಕ ಹುದಿಕೇರಿ ರಾಜೇಂದ್ರ ಅವರು ಕಲೆ ಮತ್ತು ಕಲಾವಿದರನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕೆಂದರು. ಮಳೆಹಾನಿ ಸಂತ್ರಸ್ತರ ಗೋಳಿಕಟ್ಟೆ ಪುನರ್ವಸತಿ ಬಡಾವಣೆಯಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳುತ್ತಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂತ್ರಸ್ತರ ಬದುಕಿನಲ್ಲಿ ಹೊಸ ವಿಶ್ವಾಸ ಮೂಡಿಸಬೇಕಿದೆ ಎಂದು ತಿಳಿಸಿದರು. ಸಮಸ್ಯೆಗಳ ಪರಿಹಾರಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಟೀಲು ಮೇಳದ ಯುವ ಯಕ್ಷಗಾನ ಕಲಾವಿದ ಅಶ್ವಥ್ ಮಂಜನಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾ.ಪಂ ಸದಸ್ಯ ನಡುಗಲ್ಲು ರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಬಿ.ಶಿವಪ್ಪ, ಮದೆ ಗ್ರಾ.ಪಂ ಉಪಾಧ್ಯಕ್ಷ ಸಿ.ಎ.ಚಂದ್ರಾವತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆಮ್ಮುಡಿರ ಜಗದೀಶ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪತಿನಿಧಿ ಸಬೀನಾ, ಮೋಗೇರ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ, ವನದುರ್ಗಾ ಪರಮೇಶ್ವರಿ ದೇವಾಲಯದ ಕಾರ್ಯದರ್ಶಿ ಹುದಿಕೇರಿ ಶಿವಪ್ಪ, ಯುವ ಮುಖಂಡ ಬಿ.ಬಿ.ಪ್ರಸಾದ್, ಗೋಳಿಕಟ್ಟೆಯ ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ ಎಂ.ಸಿ.ಲೋಕೇಶ್, ಮೊಗೇರ ಸಮಾಜದ ಮದೆ ಗ್ರಾಮ ಅಧ್ಯಕ್ಷ ಪಿ.ಬಿ.ಶಂಕರ್, ಸ್ವಾಮಿ ವಿವೇಕಾನಂದ ಯಕ್ಷ ಸಮಿತಿಯ ಅಧ್ಯಕ್ಷ ಪಿ.ಡಿ.ಸುಭಾಷ್, ಮದೆ ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಆರ್.ಪೂವಿ, ಅಕ್ಷಯ್ ಮಂಡೋಸ್ ಹಾಜರಿದ್ದರು.
ಪಿ.ಬಿ.ಅಕ್ಷತಾ ಮತ್ತು ಬಳಗ ಪ್ರಾರ್ಥಿಸಿ, ಪಿ.ಯು.ಸುಂದರ ಸ್ವಾಗತಿಸಿದರು. ಅಕ್ಷತಾ ನಿರೂಪಿಸಿ, ಪೂಜಾ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ನಡೆದ ಪೌರಣಿಕ ಯಕ್ಷಗಾನ ಬಯಲಾಟ “ಮಹಿಷ ಮರ್ಧಿನಿ” ಗ್ರಾಮಸ್ಥರ ಗಮನ ಸೆಳೆಯಿತು.

error: Content is protected !!