ಜಾದೂಗಾರರ ದಿನಾಚರಣೆ : ಫೆ.23 ರಂದು ಮಡಿಕೇರಿಯಲ್ಲಿ ವಿಶಿಷ್ಟ ಕಾರ್ಯಕ್ರಮಗಳ ಪ್ರದರ್ಶನ

February 20, 2021

ಮಡಿಕೇರಿ ಫೆ.20 : ವಿಕ್ರಮ್ಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾಜಿಕ್ ಅಂಡ್ ಅಲೈಡ್ ಆಟ್ರ್ಸ್ ಸಂಸ್ಥೆಯ ವತಿಯಿಂದ ಭಾರತೀಯ ಜಾದೂರಂಗದ ಪಿತಾಮಹ ಪಿ.ಸಿ.ಸೋರ್ಕಾರ್ ಅವರ 109ನೇ ಜನ್ಮ ದಿನದ ಪ್ರಯುಕ್ತ ಫೆ.23 ರಂದು ಜಾದೂಗಾರರ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಸಂಸ್ಥೆಯ ಸಂಚಾಲಕ ವಿಕ್ರಂ ಜಾದೂಗಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6.30 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಪಿ.ಸಿ.ಸೋರ್ಕಾರ್ ಸಂಸ್ಮರಣೆ, ಉಚಿತ ಜಾದೂ ಪದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಜಿಲ್ಲಾಧಿಕಾರಿ ಜಾರುಲತಾ ಸೋಮಲ್ ಅವರು ಉದ್ಘಾಟಿಸಲಿದ್ದಾರೆ ಎಂದರು.
ವಿಶೇಷ ಆಕರ್ಷಣೆಯಾಗಿ ಬೆಂಗಳೂರಿನ ಸುಪ್ರಸಿದ್ಧ ಜಾದೂಗಾರ, ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿರುವÀ ಮ್ಯಾಜಿಕ್ ಚಾನ್ ಖ್ಯಾತಿಯ ಪ್ರೋ.ಚಂದ್ರಶೇಖರ್ ಹಾಗೂ ಕಾಮಿಡಿ ಜಾದೂಗಾರ ರಾವ್ ಬದ್ರಿನಾಥ್ ಕಾರ್ಯಕ್ರಮ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಗರಸಭೆ ಪೌರಯುಕ್ತ ರಾಮ್‍ದಾಸ್, ಮೂಡ ಅಧ್ಯಕ್ಷ ರಮೇಶ್ ಹೊಳ್ಳ, ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ. ರವೀಂದ್ರ ರೈ, ಬಂಟ್ಸ್ ಸಂಘದ ಗೌರವ ಅಧ್ಯಕ್ಷ ಬಿ.ಬಿ.ಐತ್ತಪ್ಪ ರೈ ಪಾಲ್ಗೊಳ್ಳಲಿದ್ದಾರೆ ಎಂದರು.
ವಿಕ್ರಮ್ಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾಜಿಕ್ ಅಂಡ್ ಅಲೈಡ್ ಆಟ್ರ್ಸ್ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಉಚಿತವಾಗಿ ಜಾದೂ ಕಲೆಯನ್ನು ಹೇಳಿಕೊಡಲಾಗುವುದು ಎಂದು ತಿಳಿಸಿದ ವಿಕ್ರಂ ಜಾದೂಗಾರ್ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

error: Content is protected !!