ಜನವಸತಿ ಪ್ರದೇಶದಲ್ಲಿ ಸ್ಮಶಾನಕ್ಕೆ ಜಾಗ : ಸುಣ್ಣದಕೆರೆ ನಿವಾಸಿಗಳ ಅಸಮಾಧಾನ

February 20, 2021

ಮಡಿಕೇರಿ ಫೆ.20 : ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಸುಣ್ಣದಕೆರೆ ಗ್ರಾಮದಲ್ಲಿ ಜನವಸತಿ ಪ್ರದೇಶದ ಜಾಗವನ್ನು ಸ್ಮಶಾನಕ್ಕೆ ಗುರುತಿಸಿರುವ ಪಂಚಾಯ್ತಿ ಕ್ರಮದ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಬಸವನಹಳ್ಳಿ ಗಿರಿಜನ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು, ಸಹಕಾರ ಸಂಘದ ವ್ಯಾಪ್ತಿಗೆ ಒಳಪಡುವ ಬೊಳ್ಳೂರು ಗ್ರಾಮದ ಸುಣ್ಣದಕೆರೆಯಲ್ಲಿ ಗಿರಿಜನರಿಗಾಗಿ ತೋಟಗಾರಿಕಾ ಇಲಾಖೆಯಿಂದ ಹಣ್ಣಿನ ತೋಟ ಮಾಡಿಕೊಡಲಾಗಿದೆ. ಇಲ್ಲಿನ ಫಸಲನ್ನು ಗಿರಿಜನರು ಬಳಕೆ ಮಾಡುತ್ತಿದ್ದಾರೆ. ಆದರೆ ಇದೀಗ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಮತ್ತು ಕೆಲವು ಸದಸ್ಯರು ಒತ್ತಡಕ್ಕೆ ಮಣಿದು ಸದರಿ ಜಾಗದಲ್ಲಿ ಸ್ಮಶಾನ ಮತ್ತು ನಿವೇಶನ ರಹಿತರಿಗೆ ಹಂಚಲು ವಸತಿ ನಿವೇಶನಕ್ಕೆ ಸ್ಥಳ ಗುರುತು ಕಾರ್ಯ ಕೈಗೊಂಡಿದ್ದಾರೆ. ಸ್ಥಳದಲ್ಲಿ ಮುನೇಶ್ವರ, ನಾಗ, ರಾಹು ಗುಳಿಗ ದೇವಸ್ಥಾನಗಳಿದ್ದು ಕಳೆದ 60 ವರ್ಷಗಳಿಂದ ಆರಾಧನೆ ನಡೆಯುತ್ತಿದೆ. ಆದ್ದರಿಂದ ಸದರಿ ಜಾಗ ಕೈಬಿಟ್ಟು ಬೇರೆಡೆ ಸ್ಮಶಾನ ಮತ್ತು ನಿವೇಶನ ಹಂಚಿಕೆಗೆ ಸ್ಥಳವನ್ನು ಆಯ್ಕೆ ಮಾಡಬೇಕಿದೆ. ಇಲ್ಲದಿದ್ದಲ್ಲಿ ಇದನ್ನು ವಿರೋಧಿಸಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಆರ್.ಕೆ.ಚಂದ್ರು ತಿಳಿಸಿದರು.
ಗ್ರಾಮಪಂಚಾಯ್ತಿ ಮಾಜಿ ಸದಸ್ಯೆ ಎಂ.ಎನ್.ಕವಿತಾ ಮಾತನಾಡಿ, ಈ ಭಾಗದಲ್ಲಿ ಬಹುತೇಕ ಗಿರಿಜನರೇ ವಾಸ ಮಾಡುತ್ತಿದ್ದಾರೆ. ಗಿರಿಜನರಿಗೆ ತೋಟಗಾರಿಕಾ ಇಲಾಖೆಯಿಂದ ಬಿಟ್ಟುಕೊಟ್ಟ 5 ಎಕರೆ ಜಾಗದಲ್ಲಿ ಸ್ಮಶಾನ ಮತ್ತು ನಿವೇಶನ ನಿರ್ಮಾಣಕ್ಕೆ ಗುರುತಿಸಿರುವುದು ಸಮಂಜಸವಲ್ಲ. ಕೂಡಲೆ ಈ ಕಾರ್ಯ ಕೈಬಿಡದಿದ್ದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಗ್ರಾಮಸ್ಥರಾದ ಎಂ.ಆರ್.ಸುರೇಶ್, ಎಸ್.ಆರ್.ಕಮಲ, ರಜಿತ್‍ಕುಮಾರ್, ಸಿ.ಕೆ.ಪಾರ್ವತಿ, ಎ.ಮಮತಾ ಇದ್ದರು.

error: Content is protected !!