‘ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ’ : ಶ್ರೀಮಂಗಲದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿದ ಚಾರುಲತ ಸೋಮಲ್

February 20, 2021

ಮಡಿಕೇರಿ ಫೆ.20 : ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲದಲ್ಲಿ ‘ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಶನಿವಾರ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶ್ರೀಮಂಗಲದ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯ ಆರಂಭದಲ್ಲಿ ಮಾತನಾಡಿದ ಎಂ.ಎನ್.ಸುಮಂತ್ ಅವರು ಶ್ರೀಮಂಗಲ ಹೋಬಳಿ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂದು ಗಮನ ಸೆಳೆದರು.
ಈ ಕುರಿತು ಮಾಹಿತಿ ನೀಡಿದ ಸೆಸ್ಕ್ ಎಇಇ ನೀಲಶೆಟ್ಟಿ ಅವರು ಶ್ರೀಮಂಗಲದಲ್ಲಿನ ವಿದ್ಯುತ್ ಉಪ ಕೇಂದ್ರ ಸಂಬಂಧ ಈಗಿರುವ 33 ಕೆವಿಯಿಂದ 66 ಕೆವಿಗೆ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಮೋಟಯ್ಯ ಅವರು ಮಾತನಾಡಿ ತೀವ್ರ ಅತೀವೃಷ್ಟಿಯಿಂದ ಎಲ್ಲಾ ರೀತಿಯ ಬೆಳೆ ಹಾನಿಯಾಗಿದ್ದು, ಇನ್ನೂ ಪರಿಹಾರ ತಲುಪಿಲ್ಲ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಈ ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಯೋಗಾನಂದ ಅವರು ಈಗಾಗಲೇ ಶೇ.40 ರಷ್ಟು ಹಣ ನೇರ ಕೃಷಿಕರ ಖಾತೆಗೆ ಜಮೆಯಾಗಿದ್ದು, ಇನ್ನೂ ಶೇ.60 ರಷ್ಟು ಹಣ ಬಿಡುಗಡೆಗೆ ಬಾಕಿ ಇದೆ. ಬಿಡುಗಡೆ ನಂತರ ಸಂಬಂಧಪಟ್ಟ ಕೃಷಿಕರ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.
ಕಟ್ಟಿಮಂದಯ್ಯ ಅವರು ಮಾತನಾಡಿ ಸರ್ಕಾರದ ಕಾರ್ಯಕ್ರಮಗಳಲ್ಲಿ ಒಂದಾದ ಪೌತಿ ಖಾತೆ ಆಂದೋಲನ ಯಶಸ್ವಿಯಾಗಬೇಕು. ಆದಷ್ಟು ತ್ವರಿತವಾಗಿ ಪೌತಿ ಖಾತೆ ಆಂದೋಲನದಡಿ ಆರ್‍ಟಿಸಿಯಲ್ಲಿ ಹೆಸರು ನಮೂದು ಮಾಡಬೇಕು ಎಂದು ಅವರು ಕೋರಿದರು.
ಕೃಷಿ, ತೋಟಗಾರಿಕೆ, ಕಾಫಿ ಸೇರಿದಂತೆ ವಿವಿಧ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ರೈತರನ್ನು ಸತಾಯಿಸದೆ ತಾಲ್ಲೂಕು ಕಚೇರಿಯಲ್ಲಿ ಆರ್‍ಟಿಸಿ, ಪ್ರಮಾಣ ಪತ್ರ ಮತ್ತಿತರ ಕೆಲಸ ಕಾರ್ಯಗಳು ತ್ವರಿತವಾಗಿ ಆಗಬೇಕು ಎಂದು ಅವರು ಮನವಿ ಮಾಡಿದರು.
ಮಳೆಗಾಲದ ಅವಧಿಯಲ್ಲಿ ಪ್ರವಾಹ ಉಂಟಾಗಿ ಶ್ರೀಮಂಗಲ ಕಾಲೋನಿ ಪ್ರವಾಹ ಉಂಟಾಗುತ್ತದೆ. ಆದ್ದರಿಂದ ಈ ಕಾಲೋನಿಗೆ ಪ್ರವಾಹ ತಡೆಯಲು ತಡೆಗೋಡೆ ನಿರ್ಮಿಸಬೇಕು ಎಂದು ಅವರು ಕೋರಿದರು.
ಪೊನ್ನಂಪೇಟೆ ತಾಲ್ಲೂಕು ಕಚೇರಿ ಅಸ್ತಿತ್ವಕ್ಕೆ ಬಂದಿದ್ದು, ಕೆಲಸ ಕಾರ್ಯಗಳು ತ್ವರಿತವಾಗಿ ಆಗಬೇಕು ಎಂದು ಅವರು ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು ಪೊನ್ನಂಪೇಟೆ ತಾಲ್ಲೂಕು ಕಚೇರಿ ಅಸ್ತಿತ್ವಕ್ಕೆ ಬಂದಿದ್ದು, ಹಂತ ಹಂತವಾಗಿ ಕೆಲಸ ಕಾರ್ಯಗಳು ಆಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದರು.
ಪೌತಿ ಖಾತೆ ಆಂದೋಲನ ಸಂಬಂಧಿಸಿದಂತೆ ತಹಶೀಲ್ದಾರ್ ಯೋಗಾನಂದ ಅವರು ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 943 ಪೌತಿ ಖಾತೆಗೆ ಅರ್ಜಿ ಸಲ್ಲಿಕೆಯಾಗಿದ್ದು, ಈಗಾಗಲೇ 150 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಕನಿಷ್ಠ ವಾರಕ್ಕೆ ನೂರಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ನಿರ್ವಹಿಸಲಾಗುವುದು. ಸಮಸ್ಯೆಗಳಿದ್ದಲ್ಲಿ ನೇರವಾಗಿ ನನ್ನ ಗಮನಕ್ಕೆ ತರುವಂತೆ ತಹಶೀಲ್ದಾರ್ ಅವರು ಕೋರಿದರು.
ಮತ್ತೊಬ್ಬ ಸಾರ್ವಜನಿಕರು ಶ್ರೀಮಂಗಲ ಹೋಬಳಿ ವ್ಯಾಪ್ತಿಯಲ್ಲಿ ಹುಲಿಗಳ ಹಾವಳಿ ವಿಪರೀತವಾಗಿದ್ದು, ಜೀವ ಭಯದಲ್ಲಿ ಬದುಕು ದೂಡುವಂತಾಗಿದೆ. ಆದ್ದರಿಂದ ಹುಲಿಗಳನ್ನು ಹಿಡಿಯುವಂತಾಗಬೇಕು. ಹುಲಿ ದಾಳಿಯಿಂದ ಜಾನುವಾರುಗಳು ಅಸು ನೀಗಿದಲ್ಲಿ 50 ಸಾವಿರ ರೂ. ಪರಿಹಾರ ವಿತರಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಬಗ್ಗೆ ಮಾಹಿತಿ ನೀಡಿದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು ಅವರು ಕಾಡು ಪ್ರಾಣಿಗಳ ಹಾವಳಿಯಿಂದ ಜಾನುವಾರು ಅಸುನೀಗಿದಲ್ಲಿ 30 ರಿಂದ 40 ಸಾವಿರ ರೂ. ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು. ಹಾಗೆಯೇ ಹುಲಿ ಹಿಡಿಯಲು ಅನುಮತಿ ಕೋರಲಾಗಿದೆ ಎಂದು ಅವರು ಹೇಳಿದರು.
ಸ್ಥಳೀಯರೊಬ್ಬರು ಮಾತನಾಡಿ ಆನೆ ಮಾನವ ಸಂಘರ್ಷ ವಿಪರೀತವಾಗಿದೆ. ಆನೆಗಳ ಹಾವಳಿಯಿಂದಾಗಿ ಬೆಳೆ ಹಾನಿಯಾಗುತ್ತಿದೆ. ಈ ಸಂಬಂಧ ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಅವರು ಮನವಿ ಮಾಡಿದರು.
ಕೆ.ಬಾಡಗ ಗ್ರಾ.ಪಂ.ಗೆ ಸ್ವಂತ ಕಟ್ಟಡವಿಲ್ಲ. ಆದ್ದರಿಂದ ಸ್ವಂತ ಜಾಗ ಒದಗಿಸಬೇಕು ಎಂದು ಅವರು ಮನವಿ ಮಾಡಿದರು. ಈ ಬಗ್ಗೆ ಮಾಹಿತಿ ನೀಡಿದ ತಹಶೀಲ್ದಾರ್ ಅವರು ಶೀಘ್ರ ಒದಗಿಸಲಾಗುವುದು ಎಂದು ಅವರು ಹೇಳಿದರು.
ಬೆಂಬಲ ಬೆಲೆಯಡಿ ಭತ್ತವನ್ನು ಖರೀದಿಸಲಾಗುತ್ತದೆ. ಆದರೆ ಕಾಲಮಿತಿಯೊಳಗೆ ಹಣ ಪಾವತಿಸುವಂತಾಗಬೇಕು. ಭತ್ತ ಬೆಳೆಯುವುದೇ ಕಷ್ಟವಾಗಿದೆ. ಬೆಳೆದ ಭತ್ತಕ್ಕೆ ಸಕಾಲದಲ್ಲಿ ಹಣ ದೊರೆಯದಿದ್ದಲ್ಲಿ ರೈತರಿಗೆ ಏನು ಉಪಯೋಗ ಎಂದು ಸಾರ್ವಜನಿಕರೊಬ್ಬರು ಅವಲತ್ತುಕೊಂಡರು.
ಬಿರುನಾಣಿ ಶಾಲೆಗೆ ಶಿಕ್ಷಕರನ್ನು ನಿಯೋಜಿಸುವಂತಾಗಬೇಕು ಎಂದು ಅಲ್ಲಿನ ಎಸ್‍ಡಿಎಂಸಿ ಅಧ್ಯಕ್ಷರು ಗಮನ ಸೆಳೆದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮಚ್ಚಾಡೋ ಅವರು ಅತಿಥಿ ಶಿಕ್ಷಕರನ್ನು ನಿಯೋಜಿಸಲು ಅವಕಾಶ ಇದ್ದು, ಶಿಕ್ಷಕರನ್ನು ತಕ್ಷಣ ನೇಮಿಸಲಾಗುವುದು ಎಂದು ತಿಳಿಸಿದರು.
ಬಿರುನಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಮಹಿಳಾ ಆರೋಗ್ಯ ಸಹಾಯಕಿಯರನ್ನು ನಿಯೋಜಿಸಬೇಕು ಎಂದು ಅಲ್ಲಿನವರು ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಮುಂದಿನ ದಿನಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.
ಇಲ್ಲಿನ ಸ್ಥಳೀಯರು ಮನೆ ನಿರ್ಮಾಣಕ್ಕೆ ಮರಳು ಸಿಗುತ್ತಿಲ್ಲ. ಆದ್ದರಿಂದ ಮರಳು ತೆಗೆಯಲು ಅವಕಾಶ ಮಾಡಬೇಕು. ಗ್ರಾಮೀಣ ಪ್ರದೇಶದ ಸಹಕಾರ ಸಂಘಗಳನ್ನು ಬಲಪಡಿಸಬೇಕು ಎಂದು ಅವರು ಕೋರಿದರು.
ಚಿಟ್ಟೆಕೊಲ್ಲಿ ಕಾಲೋನಿಯಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡುವಂತಾಗಬೇಕು. ಹಾಗೆಯೇ ಸಮುದಾಯ ಭವನ ನಿರ್ಮಿಸಬೇಕು ಎಂದು ಸಾರ್ವಜನಿಕರೊಬ್ಬರು ಮನವಿ ಮಾಡಿದರು.
ಪೋಡಿ ಮುಕ್ತ ಗ್ರಾಮ ಸಂಬಂಧಿಸಿದಂತೆ ಸರ್ವೇ ಕಾರ್ಯ ಆಗಬೇಕು ಎಂದು ಸಾರ್ವಜನಿಕರೊಬ್ಬರು ಗಮನ ಸೆಳೆದರು. ಈ ಬಗ್ಗೆ ಮಾಹಿತಿ ನೀಡಿದ ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ ಅವರು ಪೋಡಿ ಮುಕ್ತ ಗ್ರಾಮ ಸಂಬಂಧಿಸಿದಂತೆ ಈಗಾಗಲೇ ಖಾಸಗಿ ಜಾಗ ಸರ್ವೆ ಕಾರ್ಯ ಪೂರ್ಣಗೊಳಿಸಲಾಗಿದೆ. ಬಾಣೆ ಜಾಗ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿರುವುದಕ್ಕೆ ಸರ್ವೇ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂಬಂಧ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಕಾಲ ಮಿತಿಯೊಳಗೆ ಸರ್ವೇ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಟಿ.ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಬೇಕು. ಆ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ. ಕಾನೂರು-ಕುಟ್ಟ ಮತ್ತು ನಾಲ್ಕೇರಿ-ಹರಿಹರ ರಸ್ತೆ ಸರಿಪಡಿಸಬೇಕು ಎಂದು ಸಾರ್ವಜನಿಕರೊಬ್ಬರು ತಿಳಿಸಿದರು.
ಆಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿಲ್ಲ ಎಂದು ಅಳಲು ತೋಡಿಕೊಂಡರು. ಸದ್ಯ ಹಣ ಈಗ ಬಿಡುಗಡೆಯಾಗಿದ್ದು, ಈ ಯೋಜನೆಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಗ್ರಾ.ಪಂ.ಪಿಡಿಒ ಅವರು ಹೇಳಿದರು. ಹೀಗೆ ಗ್ರಾಮೀಣ ಪ್ರದೇಶಗಳಿಗೆ ಕುಂದುಕೊರತೆ ಸಂಬಂಧಿಸಿದಂತೆ ಸಾರ್ವಜನಿಕರು ಬೆಳಕು ಚೆಲ್ಲಿದರು.
ತಹಶೀಲ್ದಾರ್ ಯೋಗಾನಂದ ಅವರು ಮಾತನಾಡಿ ಈಗಾಗಲೇ ಪೊನ್ನಂಪೇಟೆ ಮತ್ತು ವಿರಾಜಪೇಟೆ 5 ಸಾವಿರ ಕುಟುಂಬಗಳಿಗೆ ಪಡಿತರ ಚೀಟಿ ವಿತರಿಸಲು ಕ್ರಮವಹಿಸಲಾಗಿದೆ. 6 ಸಾವಿರ ಕುಟುಂಬಗಳಿಗೆ ನಿವೇಶನ ಒದಗಿಸಲಾಗುತ್ತದೆ. ಸ್ಮಶಾನ ಹಾಗೂ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಭೂಮಿ ಹಸ್ತಾಂತರಿಸಲಾಗುತ್ತದೆ ಎಂದು ಹೇಳಿದರು.

error: Content is protected !!