ಕೋವಿಡ್ ನಿಯಂತ್ರಣ : ಅಗತ್ಯ ಕ್ರಮಕ್ಕೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಸೂಚನೆ

ಮಡಿಕೇರಿ ಫೆ.20 : ಜಿಲ್ಲೆಯಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಅವಲೋಕಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ನಿಯಂತ್ರಣ ಕುರಿತಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆರೋಗ್ಯ, ಕಂದಾಯ, ಆರಕ್ಷಕ, ಪ್ರಾದೇಶಿಕ ಸಾರಿಗೆ, ಶಿಕ್ಷಣ ಇಲಾಖೆ, ಅಬಕಾರಿ ಮತ್ತು ಇನ್ನಿತರೆ ಇಲಾಖೆಗಳ ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ಕುಟ್ಟ, ಮಾಕುಟ್ಟ, ಕರಿಕೆ ಮತ್ತು ಸಂಪಾಜೆ ಮುಖ್ಯ ರಸ್ತೆಯ ಮೂಲಕ ಮಾತ್ರ ಆಗಮಿಸಲು ಅವಕಾಶ ಕಲ್ಪಿಸಲಾಗಿದೆ.
ಈ ರೀತಿಯಾಗಿ ಆಗಮಿಸುವವರೆಲ್ಲರೂ ಕನಿಷ್ಟ 72 ಗಂಟೆಗಳ ಒಳಗೆ ಪಡೆದಿರುವ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ನ್ನು ಕಡ್ಡಾಯವಾಗಿ ಹೊಂದಿರಬೇಕು. ಈ ಬಗ್ಗೆ ಕಟ್ಟುನಿಟ್ಟಾಗಿ ಪರಿಶೀಲಿಸುವ ಸಲುವಾಗಿ ಪರಿಶೀಲನಾ ತಂಡವನ್ನು ರಚಿಸಲಾಗಿದೆ.
ಕುಟ್ಟ, ಮಾಕುಟ್ಟ, ಕರಿಕೆ ಮತ್ತು ಸಂಪಾಜೆ ಮುಖ್ಯ ರಸ್ತೆಯ ಚೆಕ್ ಪೋಸ್ಟ್ಗಳಲ್ಲಿ ಆರೋಗ್ಯ, ಕಂದಾಯ, ಸಾರಿಗೆ, ಅರಣ್ಯ, ಆರಕ್ಷಕ ಇಲಾಖೆಗಳ ಸಿಬ್ಬಂದಿಗಳುಳ್ಳ ತಪಾಸಣಾ ತಂಡವನ್ನು ರಚಿಸಿ ನಿಯೋಜಿಸಲಾಗಿದ್ದು, ಆಗಮಿಸುವ ಪ್ರತಿಯೊಬ್ಬರ ಕನಿಷ್ಟ 72 ಗಂಟೆಗಳ ಒಳಗೆ ಪಡೆದಿರುವ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ನ್ನು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಲಿರುತ್ತಾರೆ.
ಜಿಲ್ಲೆಯ ವಸತಿ ನಿಲಯಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳು ಆಗಾಗ್ಗೆ ನೆರೆಯ ಕೇರಳ ರಾಜ್ಯಕ್ಕೆ ಸಂಚರಿಸುವುದನ್ನು ಕಡಿಮೆಗೊಳಿಸಲು ಸೂಚಿಸಲಾಗಿದೆ. ಹಾಲಿ ಈ ರೀತಿಯಾಗಿ ಸಂಚರಿಸಿರುವ ವಿದ್ಯಾರ್ಥಿಗಳ ಆರ್ಟಿಪಿಸಿಆರ್ ಪರೀಕ್ಷೆಯನ್ನು ನಡೆಸಲಾಗುವುದು.
ಆರೋಗ್ಯ ಇಲಾಖೆ ವತಿಯಿಂದ ರಚಿಸಲಾಗಿರುವ ತಂಡ ಮೊಬೈಲ್ ಯೂನಿಟ್ ಮೂಲಕ ಮೇಲಿನ 4 ಚೆಕ್ಪೋಸ್ಟ್ಗಳಲ್ಲಿ, ಜಿಲ್ಲೆಯ ಪ್ರವಾಸಿ/ ಪ್ರೇಕ್ಷಣೀಯ ಸ್ಥಳಗಳು ಹಾಗೂ ಅಧಿಕ ಜನ ಸಂದಣಿ ಇರುವ ಪ್ರದೇಶ/ ಸಂತೆ ಮುಂತಾದ ಸ್ಥಳಗಳಲ್ಲಿ ರ್ಯಾಂಡಮ್ ಟೆಸ್ಟ್ ನಡೆಸಲಿರುತ್ತಾರೆ.
ಕೇರಳ ರಾಜ್ಯದ ಗಡಿಭಾಗದಲ್ಲಿರುವ ಕೊಡಗು ಜಿಲ್ಲೆಗೆ ಸೇರಿದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಕೂಡಲೇ ಕಡ್ಡಾಯವಾಗಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸುವುದು. ಅಲ್ಲದೆ, ಕೋವಿಡ್-19 ಮಾರ್ಗಸೂಚಿಯಂತೆ ಮಾಸ್ಕ್/ ಮುಖಗವಸು ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮತ್ತಿತರ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸುವುದು.
ಜಿಲ್ಲೆಯ ಎಲ್ಲಾ ಹೋಟೆಲ್, ರೆಸಾರ್ಟ್, ಹೋಂ ಸ್ಟೇ, ಲಾಡ್ಜ್ಗಳಿಗೆ ವಸತಿ ಸೌಕರ್ಯಕ್ಕಾಗಿ ಆಗಮಿಸುವವರು ಕನಿಷ್ಟ 72 ಗಂಟೆಗಳ ಒಳಗಾಗಿ ಪಡೆದಿರುವ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ನ್ನು ಹೊಂದಿರುವ ಬಗ್ಗೆ ಸಂಬಂಧಪಟ್ಟ ಮಳಿಗೆಗಳ ಮಾಲೀಕರು ಅಥವಾ ವ್ಯವಸ್ಥಾಪಕರು ಖಚಿತಪಡಿಸಿಕೊಳ್ಳುವುದು. ಈ ಬಗ್ಗೆ ನಿಯೋಜಿಸಲ್ಪಟ್ಟ ತಂಡದ ಅಧಿಕಾರಿಗಳು ಯಾವುದೇ ವೇಳೆಯಲ್ಲಿ ಅನಿರೀಕ್ಷಿತ ಭೇಟಿ ನೀಡಲಿದ್ದು, ಯಾವುದೇ ಲೋಪ ಅಥವಾ ಆದೇಶದ ಉಲ್ಲಂಘನೆ ಕಂಡುಬಂದಲ್ಲಿ ವಿವಿಧ ಕಾಯ್ದೆಯಡಿ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು.
ಕೇರಳ ರಾಜ್ಯದ ಗಡಿಭಾಗಗಳಲ್ಲಿನ ಜಿಲ್ಲೆಗೆ ಸೇರಿದ ಪ್ರದೇಶಗಳಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್, ಸ್ಟಾರ್ ಹೋಟೆಲ್ ಮುಂತಾದವುಗಳಿಗೆ ಆತಿಥ್ಯಕ್ಕಾಗಿ ಕೇರಳ ರಾಜ್ಯದಿಂದ ಸಾರ್ವಜನಿಕರು ಆಗಮಿಸುತ್ತಿದ್ದಲ್ಲಿ, ಅಂತಹ ಮಳಿಗೆಗಳ ಮಾಲೀಕರು ಅಥವಾ ವ್ಯವಸ್ಥಾಪಕರು ಗಮನಹರಿಸಿ ಆಗಮಿಸುವವರು ಕಡ್ಡಾಯವಾಗಿ ಕನಿಷ್ಟ 72 ಗಂಟೆಗಳ ಒಳಗಾಗಿ ಪಡೆದಿರುವ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ನ್ನು ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಈ ಬಗ್ಗೆ ಕಾರ್ಯಾಚರಣೆ ತಂಡ ಅನಿರೀಕ್ಷಿತ ಭೇಟಿ ನೀಡಲಿದ್ದು, ಆದೇಶದ ಉಲ್ಲಂಘನೆಯಾದಲ್ಲಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕ ಹಿತಾಸಕ್ತಿಯಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ. ಉಲ್ಲಂಘನೆಯು ಭಾರತೀಯ ದಂಡ ಸಂಹಿತೆ ಕಲಂ 188 ಹಾಗೂ ವಿವಿಧ ಕಾಯ್ದೆಗಳಡಿ ದಂಡನೀಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ತಿಳಿಸಿದ್ದಾರೆ.