ಕೇರಳದಿಂದ ಕೊಡಗಿಗೆ ಆಗಮಿಸುವವರಿಗೆ ಕೋವಿಡ್ ನಗೆಟಿವ್ ವರದಿ ಕಡ್ಡಾಯ

February 20, 2021

ಮಡಿಕೇರಿ ಫೆ.20 : ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್-19ರ ರೂಪಾಂತರ ವೈರಸ್ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ವೈರಸ್ ನಿಯಂತ್ರಣ ಕುರಿತಂತೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಆರೋಗ್ಯ, ಕಂದಾಯ, ಪೊಲೀಸ್, ಪ್ರಾದೇಶಿಕ ಸಾರಿಗೆ, ಶಿಕ್ಷಣ, ಅಬಕಾರಿ ಹಾಗೂ ಇತರ ಇಲಾಖೆಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಅದರಂತೆ ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ಕುಟ್ಟ, ಮಾಕುಟ್ಟ, ಕರಿಕೆ ಮತ್ತು ಸಂಪಾಜೆ ಮುಖ್ಯ ರಸ್ತೆಯ ಮೂಲಕ ಮಾತ್ರ ಆಗಮಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ರೀತಿ ಆಗಮಿಸುವವರು ಕನಿಷ್ಟ 72ಗಂಟೆಗಳ ಒಳಗೆ ಪಡೆದಿರುವ ಆರ್‍ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ ಈ ಸಂಬಂಧ ಪರಿಶೀಲಿಸಲು ಜಿಲ್ಲಾಡಳಿತ ಪರಿಶೀಲನಾ ತಂಡವನ್ನೂ ರಚಿಸಿದೆ.
ಕುಟ್ಟ, ಮಾಕುಟ್ಟ, ಕರಿಕೆ ಮತ್ತು ಸಂಪಾಜೆ ಚೆಕ್‍ಪೋಸ್ಟ್‍ಗಳಲ್ಲಿ ಆರೋಗ್ಯ, ಕಂದಾಯ, ಸಾರಿಗೆ, ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿಗಳ ತಪಾಸಣಾ ತಂಡವನ್ನು ನಿಯೋಜಿಸಲಾಗಿದ್ದು, ಈ ತಂಡವು ಕೋವಿಡ್ ನೆಗೆಟಿವ್ ವರದಿಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯ ವಸತಿನಿಲಯಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳು ಆಗಾಗ್ಗೆ ನೆರೆಯ ಕೇರಳ ರಾಜ್ಯಕ್ಕೆ ಸಂಚರಿಸುವುದನ್ನು ಕಡಿಮೆ ಮಾಡುವಂತೆಯೂ ಸೂಚಿಸಲಾಗಿದ್ದು, ಹಾಲಿ ಈ ರೀತಿ ಸಂಚರಿಸಿರುವ ವಿದ್ಯಾರ್ಥಿಗಳ ಆರ್‍ಟಪಿಸಿಆರ್ ಪರೀಕ್ಷೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.
ನೆಗೆಟಿವ್ ವರದಿ ಕಡ್ಡಾಯ: ಜಿಲ್ಲೆಯ ಎಲ್ಲಾ ಹೊಟೇಲ್, ರೆಸಾರ್ಟ್, ಹೋಂಸ್ಟೇ, ಲಾಡ್ಜ್ ಮುಂತಾದವುಗಳಿಗೆ ಆಗಮಿಸುವವರು ಕೂಡಾ ಕನಿಷ್ಟ 72 ಗಂಟೆಗಳ ಒಳಗಾಗಿ ಪಡೆದಿರುವ ಆರ್‍ಟಿಪಿಸಿರ್ ನೆಗೆಟಿವ್ ರಿಪೋರ್ಟ್ ಹೊಂದಿರುವ ಬಗ್ಗೆ ಸಂಬಂಧಿಸಿದ ಮಳಿಗೆಗಳ ಮಾಲಕರು ಅಥವಾ ವ್ಯವಸ್ಥಾಪಕರು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಕೇರಳ ರಾಜ್ಯದ ಗಡಿಭಾಗಗಳಲ್ಲಿನ ಜಿಲ್ಲೆಗೆ ಸೇರಿದ ಪ್ರದೇಶಗಳಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್, ಸ್ಟಾರ್ ಹೊಟೇಲ್ ಮುಂತಾದವುಗಳಿಗೆ ಆತಿಥ್ಯಕ್ಕಾಗಿ ಕೇರಳ ರಾಜ್ಯದಿಂದ ಸಾರ್ವಜನಿಕರು ಆಗಮಿಸುತ್ತಿದ್ದಲ್ಲಿ ಅಂತಹವರು ಕಡ್ಡಾಯವಾಗಿ ಕನಿಷ್ಟ 72 ಗಂಟೆಗಳ ಒಳಗಾಗಿ ಪಡೆದಿರುವ ನೆಗೆಟಿವ್ ರಿಪೋರ್ಟ್ ಹೊಂದಿರುವ ಬಗ್ಗೆ ಮಳಿಗೆಗಳ ಮಾಲಕರು ಅಥವಾ ವ್ಯವಸ್ಥಾಪಕರು ಗಮನಹರಿಸಬೇಕು ಎಂದು ಸೂಚಿಸಲಾಗಿದೆ.
ಈ ಬಗ್ಗೆ ಪರಿಶೀಲಿಸಲು ನಿಯೋಜಿಸಲ್ಪಟ್ಟ ತಂಡದ ಅಧಿಕಾರಿಗಳು ಯಾವುದೇ ವೇಳೆಯಲ್ಲಿ ಅನಿರೀಕ್ಷಿತ ಭೇಟಿ ನೀಡಲಿದ್ದು, ಯಾವುದೇ ಲೋಪ ಅಥವಾ ಆದೇಶದ ಉಲ್ಲಂಘನೆ ಕಂಡುಬಂದಲ್ಲಿ ವಿವಿಧ ಕಾಯ್ದೆಗಳಡಿ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ರ್ಯಾಂಡಮ್ ಟೆಸ್ಟ್: ಆರೋಗ್ಯ ಇಲಾಖೆ ವತಿಯಿಂದ ರಚಿಸಲಾಗಿರುವ ತಂಡವು ಮೊಬೈಲ್ ಯೂನಿಟ್ ಮೂಲಕ ಜಿಲ್ಲೆಯ ನಾಲ್ಕು ಚೆಕ್‍ಪೋಸ್ಟ್‍ಗಳಲ್ಲಿ, ಜಿಲ್ಲೆಯ ಪ್ರವಾಸಿ ಕೇಂದ್ರ, ಪ್ರೇಕ್ಷಣಿಯ ಸ್ಥಳಗಳು ಹಾಗೂ ಅಧಿಕ ಜನಸಂದಣಿ ಇರುವ ಸಂತೆ ಮತ್ತಿತರ ಪ್ರದೇಶಗಳಲ್ಲಿ ರ್ಯಾಂಡಮ್ ಪರೀಕ್ಷೆಯನ್ನೂ ಕೈಗೊಳ್ಳಲಿದೆ.
ಕೇರಳ ರಾಜ್ಯದ ಗಡಿಭಾಗಗಳಲ್ಲಿರುವ ಕೊಡಗು ಜಿಲ್ಲೆಗೆ ಸೇರಿದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಕೂಡಲೇ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದ್ದು, ಇದರೊಂದಿಗೆ ಕೋವಿಡ್-19 ಮಾರ್ಗಸೂಚಿಯಂತೆ ಮಾಸ್ಕ್, ಮುಖಗವಸು ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಇತ್ಯಾದಿಗಳ ಬಗ್ಗೆಯೂ ಹೆಚ್ಚಿನ ಗಮನಹರಿಸುವಂತೆ ನಿರ್ದೇಶನ ನೀಡಲಾಗಿದೆ.
ಸಾರ್ವಜನಿಕ ಹಿತಾಸಕ್ತಿಯಿಂದ ಕೈಗೊಳ್ಳಲಾಗಿರುವ ಈ ಕ್ರಮಗಳನ್ನು ಉಲ್ಲಂಘಿಸುವುದು ಭಾರತೀಯ ದಂಡ ಸಂಹಿತೆ ಕಲಂ 188ರ ಹಾಗೂ ವಿವಿಧ ಕಾಯ್ದೆಗಳಡಿ ದಂಡನೀಯವಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.

error: Content is protected !!