ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಸ್ಪರ್ಧೆ : ಭವಿಷ್ಯದ ವಿಜ್ಞಾನಿಗಳಾಗಲು ವಿದ್ಯಾರ್ಥಿಗಳಿಗೆ ಬೇಬಿಮ್ಯಾಥ್ಯೂ ಕರೆ

February 21, 2021

ಮಡಿಕೇರಿ ಫೆ.21 : ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ನಗರದ ರೋಟರಿ ಮಿಸ್ಟಿ ಹಿಲ್ಸ್ ನ ಸಹಯೋಗದಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಶನಿವಾರ ಕೊಡಗು ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸ್ಕೌಟ್ಟ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ಟಿ.ಬೇಬಿಮಾಥ್ಯೂ, ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನಲ್ಲಿ ಪ್ರಕೃತಿಯಲ್ಲಿ ನಡೆಯುತ್ತಿರುವ ಪ್ರಾಕೃತಿಕ ವಿಕೋಪಗಳಂತಹ ಪೃಕೃತಿ ಹಾಗೂ ಪರಿಸರದ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಕಾರಣಗಳನ್ನು ಕಂಡುಕೊಂಡು ವೈಜ್ಞಾನಿಕವಾಗಿ ಪರಿಹರಿಸುವ ನಿಟ್ಟಿನಲ್ಲಿ ಸಂಶೋಧನೆಯಲ್ಲಿ ತೊಡಗುವ ಮೂಲಕ ಭವಿಷ್ಯದ ವಿಜ್ಞಾನಿಗಳಾಗಿ ರೂಪುಗೊಳ್ಳಬೇಕು ಎಂದರು.
ಇಂತಹ ವಿಜ್ಞಾನ ಸ್ಪರ್ಧೆಗಳು ಮಕ್ಕಳಲ್ಲಿ ಕ್ರಿಯಾಶೀಲತೆ ಹಾಗೂ ಸೃಜನಶೀಲತೆ ಬೆಳೆಸುವುದರೊಂದಿಗೆ ಅವರನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಉತ್ತಮ ವೇದಿಕೆ ಕಲ್ಪಿಸುತ್ತವೆ ಎಂದರು.
ಜಿಲ್ಲೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ವಿಜ್ಞಾನ ಮತ್ತು ಪರಿಸರಪೂರಕ ಚಟುವಟಿಕೆಗಳನ್ನು ಉತ್ತಮವಾಗಿ ಸಂಘಟಿಸುತ್ತಿರುವುದು ಶ್ಲಾಘನೀಯವಾದುದು. ಮಕ್ಕಳ ಇಂತಹ ಸ್ಪರ್ಧಾ ಕಾರ್ಯಕ್ರಮಗಳಿಗೆ ಹೆಚ್ಚಿನ ಪೆÇ್ರೀತ್ಸಾಹ ಅಗತ್ಯ ಬೇಕು ಎಂದು ಬೇಬಿಮ್ಯಾಥ್ಯೂ ಎಂದರು.
ತಾಂತ್ರಿಕ ಅಧಿವೇಶನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿ ಕೆ.ಕಾಂತರಾಜು, ವಿದ್ಯಾರ್ಥಿಗಳು ತಮ್ಮನ್ನು ವೈಜ್ಞಾನಿಕ ಚಿಂತನೆ ಬೆಳೆಸಿಕೊಂಡು ಮೂಲವಿಜ್ಞಾನ ಕಲಿಕೆಯೊಂದಿಗೆ ಹೊಸ ಹೊಸ ಆವಿಷ್ಕಾರಗಳ ಕುರಿತು ಹೆಚ್ಚಿನ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಇಂತಹ ಸ್ಪರ್ಧೆ ಗಳು ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ಸಹಕಾರಿಯಾಗಿವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಟಿ.ಜಿ.ಪ್ರೇಮಕುಮಾರ್, ಇಂತಹ ಸ್ಪರ್ಧೆಗಳು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಲು ಸಹಕಾರಿಯಾಗಿವೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ನ ಉಪಾಧ್ಯಕ್ಷ ಎಂ.ಧನಂಜಯ ಮಾತನಾಡಿದರು.
ಕಾರ್ಯಕ್ರಮದ ನೋಡಲ್ ಅಧಿಕಾರಿ ಎಸ್.ಟಿ.ವೆಂಕಟೇಶ್ , ಕಾಲೇಜಿನ ಪ್ರಾಂಶುಪಾಲ ಪಿ.ಆರ್. ವಿಜಯ್, ಉಪ ಪ್ರಾಂಶುಪಾಲರಾದ ಸೌಮ್ಯಲತಾ, ಜಿಲ್ಲಾ ಸ್ಕೌಟ್ಸ್ ಸಂಸ್ಥೆಯ ಕಮೀಷನರ್ ಜಿಮ್ಮಿ ಸಿಕ್ವೇರಾ ,ಸ್ಪರ್ಧಾ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ, ಉಪನ್ಯಾಸಕ ಎಸ್.ಎಚ್.ಈಶ, ಬಿ.ಆರ್.ಪಿ.ಪುಟ್ಟರಂಗನಾಥ್ ಹಾಜರಿದ್ದರು.

error: Content is protected !!