ಸೋಮವಾರಪೇಟೆಯಲ್ಲಿ ಗ್ರಾ.ಪಂ ಚುನಾಯಿತ ಪ್ರತಿನಿಧಿಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ

ಮಡಿಕೇರಿ ಫೆ.21 : ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ವತಿಯಿಂದ ಗ್ರಾಮ ಪಂಚಾಯಿತಿಗೆ ನೂತನವಾಗಿ ಚುನಾಯಿತರಾಗಿರುವ ಪ್ರತಿನಿಧಿಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ ಸೋಮವಾರಪೇಟೆ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಬೇಳೂರು, ಬ್ಯಾಡಗೊಟ್ಟ, ಐಗೂರು, ಆಲೂರು ಸಿದ್ದಾಪುರ ಪಂಚಾಯಿತಿಗಳ ಸದಸ್ಯರುಗಳಿಗೆ ಐದು ದಿನಗಳ ತರಬೇತಿ ಕಾರ್ಯಾಗಾರ ನಡೆಯಿತು.
ಸರ್ಕಾರದ ಯೋಜನೆಗಳು ಮತ್ತು ಸಮಿತಿಗಳ ರಚನೆ, ಸಭೆ ನಡೆಸುವ ವಿಧಾನಗಳು, ಆಧುನಿಕ ತಂತ್ರಜ್ಞಾನದ ಮೂಲಕ ಜಾರಿಯಾಗುವ ಸರ್ಕಾರದ ಯೋಜನೆಗಳ ಮಾಹಿತಿಗಳು, ಅಧಿಕಾರ ವಿಕೇಂದ್ರೀಕರಣ, ಸಂಪನ್ಮೂಲ ಕ್ರೋಡೀಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಹಿರಿಯ ಐಎಎಸ್ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಪ್ರಸಾರ ಮಾಡಿ ತರಬೇತಿ ಅಧಿಕಾರಿಗಳಾದ ರವಿ ಹಾಗೂ ದಿನೇಶ್ ವಿವರಿಸಿದರು.
ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ನೇರ ಪ್ರಶ್ನೋತ್ತರವೂ ನಡೆಯಿತು. ಸದಸ್ಯರುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಪ್ರಮಾಣಪತ್ರವನ್ನು ನೀಡಲಾಯಿತು. ಈ ಬಗ್ಗೆ ಮಾತನಾಡಿದ ಕಾರ್ಯನಿರ್ವಾಹಣಾಧಿಕಾರಿ ಜಯಣ್ಣ ಹಂತ ಹಂತವಾಗಿ ತಾಲ್ಲೂಕಿನ ಎಲ್ಲಾ ಪಂಚಾಯತ್ ಸದಸ್ಯರುಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಈಗಾಗಲೇ ಆಯಾಯ ಪಂಚಾಯತ್ ಗಳಿಗೆ ಮಾಹಿತಿಯನ್ನು ಕಳುಹಿಸಲಾಗಿದ್ದು, ಎಲ್ಲಾ ಸದಸ್ಯರುಗಳು ನಿಗದಿಪಡಿಸಿದ ದಿನಾಂಕಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿದರು.
ತಾ.ಪಂ ಅಧ್ಯಕ್ಷೆ ಪುಷ್ಪ ರಾಜೇಶ್, ಉಪಾಧ್ಯಕ್ಷ ಅಭಿಮನ್ಯುಕುಮಾರ್, ಅಧಿಕಾರಿಗಳಾದ ಆಶ್ವತ್ ಕುಮಾರ್, ರವೀಶ್, ಸ್ವಚ್ಛ ಭಾರತ್ ಮಿಷನ್ ಅಧಿಕಾರಿ ಪೆಮ್ಮಯ್ಯ ಮತ್ತಿತರರು ಹಾಜರಿದ್ದರು.