ಹುಲಿದಾಳಿ ಪ್ರಕರಣ : ಅರಣ್ಯ ಸಚಿವರ ರಾಜೀನಾಮೆಗೆ ಕೊಡಗು ಜೆಡಿಎಸ್ ಒತ್ತಾಯ

ಮಡಿಕೇರಿ ಫೆ.21 : ದಕ್ಷಿಣ ಕೊಡಗಿನ ಶ್ರೀಮಂಗಲದಲ್ಲಿ ಹುಲಿ ದಾಳಿಗೆ ಎರಡು ಜೀವ ಬಲಿಯಾಗಲು ಸರ್ಕಾರದ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿರುವ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಅರಣ್ಯ ಸಚಿವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಕೊಡಗು ಜಿಲ್ಲೆಯಲ್ಲಿ ನಿರಂತರ ಹುಲಿ ಮತ್ತು ಕಾಡಾನೆಗಳ ದಾಳಿಯಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರ ಮೈಮರೆತದ್ದೇ ಎರಡು ಅಮಾಯಕ ಜೀವಗಳು ಬಲಿಯಾಗಲು ಕಾರಣವೆಂದು ಆರೋಪಿಸಿದ್ದಾರೆ.
ಇತ್ತೀಚೆಗಷ್ಟೇ ಮಡಿಕೇರಿಗೆ ಆಗಮಿಸಿದ್ದ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಅರಣ್ಯ ಭವನದ ನಾಲ್ಕು ಗೋಡೆಗಳ ಮಧ್ಯ ಅಧಿಕಾರಿಗಳ ಕಾಟಾಚಾರದ ಸಭೆ ನಡೆಸಿ ಹೋಗಿದ್ದಾರೆ. ಜಿಲ್ಲೆಯ ಜನ ವನ್ಯಜೀವಿಗಳ ದಾಳಿಯಿಂದ ಅನುಭವಿಸುತ್ತಿರುವ ಕಷ್ಟ, ನಷ್ಟಗಳ ಬಗ್ಗೆ ಸಚಿವರು ಯಾವುದೇ ಗಂಭೀರ ಚಿಂತನೆ ಮಾಡಿಲ್ಲ. ಗ್ರಾಮಸ್ಥರು ಹಾಗೂ ಬೆಳೆಗಾರರೊಂದಿಗೆ ಸಭೆ ನಡೆಸಿ ಕಾಡು ಪ್ರಾಣಿಗಳ ಹಾವಳಿಯ ಕುರಿತು ಅಭಿಪ್ರಾಯ ಸಂಗ್ರಹಿಸದೆ ಕೇವಲ ಅಧಿಕಾರಿಗಳಿಂದ ಮಾಹಿತಿ ಪಡೆದ ತೆರಳಿರುವ ಅರಣ್ಯ ಸಚಿವರು ಶ್ರೀಮಂಗಲದ ಘಟನೆಗೆ ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿರುವ ಗಣೇಶ್, ಸಚಿವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.
ತಕ್ಷಣ ಸರ್ಕಾರ ಎಚ್ಚೆತ್ತುಕೊಂಡು ವನ್ಯಜೀವಿಗಳ ದಾಳಿ ತಡೆಗೆ ಶಾಶ್ವತ ಪರಿಹಾರವನ್ನು ಘೋಷಿಸಿ ಯೋಜನೆಯನ್ನು ರೂಪಿಸದಿದ್ದಲ್ಲಿ ಗ್ರಾಮಸ್ಥರು, ಬೆಳೆಗಾರರು, ವಿವಿಧ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಜೆಡಿಎಸ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.