ಎನ್.ಎನ್.ನಿರುತ್ ಗೆ ಯುವ ವಿಜ್ಞಾನಿ ಪ್ರಶಸ್ತಿಯ ಗರಿ : ಕೆ.ಕೆ.ಹರ್ಷಿತ್ ಗೆ ದ್ವಿತೀಯ ಸ್ಥಾನ

ಮಡಿಕೇರಿ ಫೆ.20 : ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಶಿಕ್ಷಣ ಇಲಾಖೆ ಹಾಗೂ ನಗರದ ರೋಟರಿ ಮಿಸ್ಟಿ ಹಿಲ್ಸ್ ನ ಸಹಯೋಗದಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಶನಿವಾರ ನಡೆದ ಕೊಡಗು ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ 9 ನೇ ತರಗತಿ ವಿದ್ಯಾರ್ಥಿ, ಯುವ ವಿಜ್ಞಾನಿ ಎನ್.ಎನ್.ನಿರುತ್ ಗೆ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಪ್ರಶಸ್ತಿ ಲಭಿಸಿದೆ.
ಮಾರ್ಗದರ್ಶಿ ಶಿಕ್ಷಕಿ ಪಿ.ಎಸ್. ಪೊನ್ನಮ್ಮಅವರ ಮಾರ್ಗದರ್ಶನದಲ್ಲಿ ಎಂಬ “ಔಷಧಿ ಸಲುವಾಗಿ ಜಿಗಣೆ ಸಾಕಣೆ” ಎಂಬ ವಿಷಯದ ಕುರಿತು ಉತ್ತಮವಾಗಿ ವೈಜ್ಞಾನಿಕ ಪ್ರಬಂಧ ಮಂಡಿಸಿದ ನಿರುತ್, ಜಿಲ್ಲಾಮಟ್ಟದಿಂದ ರಾಜ್ಯಮಟ್ಟದ ಯುವ ವಿಜ್ಞಾನಿ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ಮಾರ್ಗದರ್ಶಿ ಶಿಕ್ಷಕ ಎ.ಎಸ್. ಕಿರಣ್ ಕುಮಾರ್ ಮಾರ್ಗದರ್ಶನದಲ್ಲಿ ” ನೀರಿನಲ್ಲಿ ಮುಳುಗಿರುವ ಮೃತದೇಹಗಳ ಪತ್ತೆಗಾಗಿ ಕಾಲ್ಪನಿಕ ವಿಧಾನ ಮತ್ತು ವನ್ಯಜೀವಿಗಳಿಂದ ಬೆಳೆಗಳನ್ನು ರಕ್ಷಿಸುವ ವಿಧಾನ ” ಎಂಬ ವಿಷಯ ಕುರಿತು ವೈಜ್ಞಾನಿಕ ಪ್ರಬಂಧ ಮಂಡಿಸಿದ ಶನಿವಾರಸಂತೆಯ ಸೆಕ್ರೆಡ್ ಹಾರ್ಟ್ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ, ಯುವ ವಿಜ್ಞಾನಿ ಎ.ಕೆ.ಹರ್ಷಿತ್ ದ್ವಿತೀಯ ಸ್ಥಾನ ಗಳಿಸಿದ್ದಾನೆ.
ಪ್ರಥಮ ಸ್ಥಾನ ಪಡೆದ ನಿರುತ್ ಗೆ ರೂ.5 ಸಾವಿರ ನಗದು ಬಹುಮಾನ ಮತ್ತು ದ್ವಿತೀಯ ಸ್ಥಾನ ಪಡೆದ ಹರ್ಷಿತ್ ಗೆ.ರೂ.3 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿ ಕೆ.ಕಾಂತರಾಜು ಯುವ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಯುವ ವಿಜ್ಞಾನಿ ಎನ್.ಎನ್.ನಿರುತ್, ನಗರದ ಜಿಲ್ಲಾಸ್ಪತ್ರೆಯ ಸರ್ಜನ್ ನೆರೆಯನ ಎಸ್.ನವೀನ್ ಹಾಗೂ ಜಿಲ್ಲಾಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಿ.ಕೆ. ರಾಜೇಶ್ವರಿ ದಂಪತಿಯ ಪುತ್ರ.
ವಿದ್ಯಾರ್ಥಿ ಎ.ಕೆ.ಹರ್ಷಿತ್, ಸೋಮವಾರಪೇಟೆ ತಾಲ್ಲೂಕಿನ ಸಿದ್ದಲಿಂಗಪುರ ಗ್ರಾಮದ ಅಮ್ಮಾಜೀರ ಎಸ್. ಕಿರಣ್ ಕುಮಾರ್ ಮತ್ತು ಕೆ.ಕೆ.ಸವಿತಾ ದಂಪತಿಯ ಪುತ್ರ.