ಅಮಾಯಕರ ಸಾವಿಗೆ ಸರ್ಕಾರವೇ ಹೊಣೆ : ಕೊಡಗು ಕಾಂಗ್ರೆಸ್ ಆರೋಪ

February 21, 2021

ಮಡಿಕೇರಿ ಫೆ.21 : ಶ್ರೀಮಂಗಲದಲ್ಲಿ ಹುಲಿ ದಾಳಿಯಿಂದ ಸಂಭವಿಸಿದ ಇಬ್ಬರು ಅಮಾಯಕರ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕೊಡಗಿನ ಬಗ್ಗೆ ಮಲತಾಯಿ ಧೋರಣೆಯನ್ನು ತಾಳಿದೆ. ಪ್ರಾಕೃತಿಕ ವಿಕೋಪ ಮತ್ತು ಕಾಡುಪ್ರಾಣಿಗಳ ದಾಳಿಯಿಂದ ಜಿಲ್ಲೆಯ ಜನ ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಯಾವುದೇ ಸ್ಪಂದನೆಯನ್ನು ನೀಡುತ್ತಿಲ್ಲ ಎಂದು ಟೀಕಿಸಿದ್ದಾರೆ.
ಸಕಾಲದಲ್ಲಿ ಸರ್ಕಾರ ಅರಣ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿದ್ದಿದ್ದರೆ ಎರಡು ಜೀವಗಳನ್ನು ಉಳಿಸಿಕೊಳ್ಳಬಹುದಾಗಿತ್ತು. ಕಳೆದ ಆರು ತಿಂಗಳುಗಳಿಂದ ನಿರಂತರವಾಗಿ ಹುಲಿ ದಾಳಿಯಾಗುತ್ತಿದ್ದು, ನೂರಾರು ಹಸುಗಳು ಬಲಿಯಾಗಿವೆ. ಆದರೂ ಸರ್ಕಾರ ನಿದ್ರಾವಸ್ಥೆಯಿಂದ ಎಚ್ಚರಗೊಳ್ಳದಿದ್ದದ್ದೇ ಇಬ್ಬರು ಅಮಾಯಕರು ಸಾವಿಗೀಡಾಗಲು ಕಾರಣವಾಯಿತು ಎಂದು ಆರೋಪಿಸಿದ್ದಾರೆ.
ಸರ್ಕಾರ ಕೇವಲ ಖಾತೆಗಳ ಹಂಚಿಕೆಯ ಸರ್ಕಸನ್ನಷ್ಟೇ ಮಾಡಿದ್ದು, ತಮ್ಮ ತಮ್ಮ ಖಾತೆಗಳ ಮೇಲೆ ಸಚಿವರುಗಳಿಗೆ ಹಿಡಿತವೇ ಇಲ್ಲದಾಗಿದೆ. ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ತಮ್ಮ ಖಾತೆಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದು, ಇವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ಜಿಲ್ಲೆಯಲ್ಲಿರುವ ಅದೇ ಪಕ್ಷದ ಶಾಸಕರುಗಳು ಪರಿಣಾಮಕಾರಿಯಾಗಿ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅಲ್ಲದೆ ಸರ್ಕಾರದಿಂದ ಜಿಲ್ಲೆಗೆ ಬೇಕಾದ ಅನುಕೂಲತೆಗಳನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ವನ್ಯಜೀವಿಗಳ ದಾಳಿಯ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರೆ ಮಾನವ ಜೀವ ಬಲಿಯಂತಹ ಘಟನೆಗಳು ನಡೆಯುತ್ತಿರಲಿಲ್ಲವೆಂದು ಮಂಜುನಾಥ್ ಕುಮಾರ್ ಟೀಕಿಸಿದ್ದಾರೆ.

error: Content is protected !!