ಶ್ರೀಮಂಗಲ ಮಂಚಳ್ಳಿಯಲ್ಲಿ ಕಾರ್ಯಾಚರಣೆ : ಮಾನವ ಜೀವ ಬಲಿ ಪಡೆದ ಹೆಣ್ಣು ಹುಲಿ ಸೆರೆ

February 21, 2021

ಮಡಿಕೇರಿ ಫೆ.21 : ಶ್ರೀಮಂಗಲದ ಟಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಇಬ್ಬರು ಅಮಾಯಕರ ಜೀವ ಬಲಿ ಪಡೆದ ಹೆಣ್ಣು ಹುಲಿಯನ್ನು ಸೆರೆ ಹಿಡಿಯುವಲ್ಲಿ ಕೊನೆಗೂ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಶನಿವಾರ ಸಂಜೆ ವಿದ್ಯಾರ್ಥಿ ಎರವರ ಅಯ್ಯಪ್ಪ (16) ಹಾಗೂ ಭಾನುವಾರ ಬೆಳಗ್ಗೆ ಕಾರ್ಮಿಕ ಮಹಿಳೆ ಚಿಣ್ಣಿ (60) ಎಂಬುವವರ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿತ್ತು. ಈ ಘಟನೆಯಿಂದ ತೀವ್ರ ಅಸಮಾಧಾನಗೊಂಡ ಗ್ರಾಮಸ್ಥರು, ರೈತ ಸಂಘ, ಬೆಳೆಗಾರರು, ವಿವಿಧ ರಾಜಕೀಯ ಪಕ್ಷಗಳ ಮತ್ತು ಸಂಘ, ಸಂಸ್ಥೆಗಳ ಮುಖಂಡರು ಶ್ರೀಮಂಗಲ ಬಂದ್ ಮಾಡಿ ರಸ್ತೆ ತಡೆ ಪ್ರತಿಭಟನೆ ನಡೆಸಿದ ಪರಿಣಾಮ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆ ನಡೆಸಿತು.
ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ನೇತೃತ್ವದ ಅಧಿಕಾರಿಗಳ ತಂಡ ಮತ್ತಿಗೋಡು ಶಿಬಿರದ ಸಾಕಾನೆಗಳಾದ ಮೈಸೂರು ದಸರಾದ ಅಂಬಾರಿ ಹೊತ್ತ ಅಭಿಮನ್ಯು, ಗೋಪಾಲಸ್ವಾಮಿ, ಮಹೇಂದ್ರ ಹಾಗೂ ಕೃಷ್ಣನ ಸಹಕಾರದಿಂದ ಹುಲಿಯ ಜಾಡು ಹಿಡಿದರು. ಸಂಜೆ ವೇಳೆಗೆ ಶ್ರೀಮಂಗಲ ಹೋಬಳಿಯ ಮಂಚಳ್ಳಿ ಎಂಬಲ್ಲಿ ಅರೆವಳಿಕೆ ನೀಡಿ ನಂತರ ಹುಲಿಯನ್ನು ಬೋನಿನಲ್ಲಿ ಬಂಧಿಸಲಾಯಿತು.
ಸುಮಾರು 50 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹುಲಿ ಸೆರೆಯಿಂದ ಶ್ರೀಮಂಗಲ, ಟಿ.ಶೆಟ್ಟಿಗೇರಿ ಭಾಗದ ಜನ ನಿಟ್ಟುಸಿರು ಬಿಟ್ಟಿದ್ದಾರೆಯಾದರೂ ವನ್ಯಜೀವಿಗಳ ದಾಳಿ ತಡೆಗೆ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆಯಿಂದ ನಿಯಂತ್ರಿಸಲು ಸಾಧ್ಯವಾಗದಿದ್ದಲ್ಲಿ ನಮ್ಮ ಕೋವಿಯನ್ನು ಬಳಸಲು ಅನುಮತಿಯನ್ನು ನೀಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
::: ಮಹಿಳೆಯನ್ನು ಕೊಂದ ಹುಲಿ :::
ಶನಿವಾರ ಸಂಜೆ ನೀರು ತರಲೆಂದು ತೆರಳಿದ್ದ ವಿದ್ಯಾರ್ಥಿ ಅಯ್ಯಪ್ಪನನ್ನು ಬಲಿ ಪಡೆದಿದ್ದ ಹುಲಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಕಾರ್ಮಿಕ ಮಹಿಳೆ ಚಿಣ್ಣಿಯ ಮೇಲೆ ದಾಳಿ ಮಾಡಿತು. ಟಿ.ಶೆಟ್ಟಿಗೇರಿಯ ಲೈನ್ ಮನೆಯಲ್ಲಿ ವಾಸವಿದ್ದ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ದಿಢೀರ್ ಆಗಿ ಮೇಲೆರಗಿದ ಹುಲಿ ಕಾಫಿ ತೋಟದೊಳಗೆ ಎಳೆದೊಯ್ದಿದೆ. ಮನೆಯವರು ಕಿರುಚಿಕೊಂಡಾಗ ಹುಲಿ ಕಾಲ್ಕಿತ್ತಿತ್ತಾದರೂ ಚಿಣ್ಣಿ ಸ್ಥಳದಲ್ಲೇ ಮೃತ ಪಟ್ಟರು.

error: Content is protected !!