ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ಸಾಹಿತ್ಯ ಭವನ ನಿರ್ಮಾಣ ನನ್ನ ಗುರಿ : ಕೇಂದ್ರ ಕಸಾಪ ಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲ ಆಶಯ

February 22, 2021

ವಿರಾಜಪೇಟೆ ಫೆ. 22 : : ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು – ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯ ಸರ್ಕಾರ, ಸಂಘ ಸಂಸ್ಥೆಗಳ ನೆರವಿನಿಂದ ಸಾಹಿತ್ಯ ಭವನ ನಿರ್ಮಿಸಲಾಗುವುದು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶೇಖರಗೌಡ ಮಾಲಿಪಾಟೀಲ ಅವರು ಹೇಳಿದರು.

ಭಾನುವಾರ ಅವರು ಪತ್ರಕರ್ತರೊಂದಿಗೆ ಮಾತಾಡುತ್ತ ಈ ವಿಚಾರ ತಿಳಿಸಿ, ನಾನು ಅಧ್ಯಕ್ಷನಾಗಿ ಆಯ್ಕೆಯಾದ ತಕ್ಷಣ ಮುಖ್ಯಮಂತ್ರಿಗಳಿಗೆ, ಎಲ್ಲ ಸಂಸದರಿಗೆ, ಶಾಸಕರಿಗೆ ಪತ್ರ ಬರೆದು ತಮ್ಮ ನಿಧಿಯಿಂದ ಕನ್ನಡ ಸಾಹಿತ್ಯ ಭವನ ನಿರ್ಮಿಸಲು ಒತ್ತಾಯಿಸುವೆ ಎಂದರು.

ಪರಿಷತ್ತಿನ ನಿಬಂಧನೆ ಪ್ರಕಾರ ಪ್ರಾಯೋಗಿಕ ಕನ್ನಡ ಶಾಲೆ, ಯುವ ಬರಹಗಾರರಿಗೆ ವಿವಿಧ ಸಾಹಿತ್ಯ ಕಮ್ಮಟಗಳು, ನಾಲ್ಕು ಕಂದಾಯ ವಿಭಾಗಗಳಲ್ಲಿ ಸಾಂಸ್ಕೃತಿಕ ಸಮಾವೇಶಗಳು, ಹೊರನಾಡು ಕನ್ನಡಿಗರ ಕೃತಿಗಳ ಪ್ರಕಟಣೆಗೆ ವಿಶೇಷ ಆದ್ಯತೆ, ಪ್ರೌಢಶಾಲೆಯಿಂದ ಸ್ನಾತಕೋತ್ತರದವರೆಗಿನ ವಿದ್ಯಾರ್ಥಿಗಳಿಗೆ ಹಳೆಗನ್ನಡ ಹಾಗೂ ಆಧುನಿಕ ಸಾಹಿತ್ಯದ ಮರು ಓದು, ಪರಿಷತ್ತು ಪ್ರಕಟಣೆಯ ಆನ್ ಲೈನ್ ಮಾರಾಟ ವ್ಯವಸ್ಥೆ ಮಾಡಲಾಗುವುದು ಎಂದು ಹಲವು ಯೋಜನೆ ಮುಂದಿಟ್ಟರು.

೧೦೬ ವರ್ಷಗಳ ಇತಿಹಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಲ್ಯಾಣ ಕರ್ನಾಟಕದಿಂದ ಯಾರೊಬ್ಬರೂ ಅಧ್ಯಕ್ಷರಾಗಿಲ್ಲ. ತಮಗೆ ಅಧ್ಯಕ್ಷರಾಗಲು ಎಲ್ಲಾ ರೀತಿಯ ಅರ್ಹತೆಗಳಿವೆ. ಜನಪರ ಚಳವಳಿಯಲ್ಲಿ ಗುರ್ತುಸಿಕೊಂಡು ೫ ಸಾಹಿತ್ಯ ಕೃತಿಗಳನ್ನು ರಚಿಸಿದ್ದೇನೆ. ಎರಡು ಅವಧಿಗೆ ಕೊಪ್ಪಳ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ, ಗಂಗಾವತಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಕಾರಣಕರ್ತನಾಗಿದ್ದೇನೆ. ಜೊತೆಗೆ ಸಹಕಾರ ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ಮಹಾಸಭಾ ಬೆಂಬಲಿಸಬೇಕು ಎಂದು ಅವರು ಮನವಿಯಲ್ಲಿ ಅರಕೆ ಮಾಡಿಕೊಂಡಿದ್ದಾರೆ. ಈ ಸಂದರ್ಭ ಡಾ. ಸೋಮಣ್ಣ, ಎಂ.ಎಸ್. ಪೂವಯ್ಯ, ಬಿ.ಎನ್. ಪರಡ್ಡಿ, ಮೈಲೇಶ್, ರಾಜೇಶ್ ಪದ್ಮನಾಭ, ಟಿ. ತಿಮ್ಮೇಶ್, ಸಿರಿಗಂಧ ಶ್ರೀನಿವಾಸಮೂರ್ತಿ, ಮಲ್ಲಿಕಾರ್ಜುನ, ಎನ್. ಶಿವಕುಮಾರ್, ಪ್ರಭಾಕರ್ ಅವರುಗಳು ಉಪಸ್ಥಿತರಿದ್ದರು.

error: Content is protected !!