ಕೇರಳದ ಗಡಿಯಲ್ಲಿ ಕರ್ನಾಟಕದ ವಾಹನಗಳಿಗೆ ತಡೆ : ರಸ್ತೆಯಲ್ಲೇ ಕುಳಿತು ಪ್ರತಿಭಟನೆ

February 22, 2021

ಮಡಿಕೇರಿ ಫೆ.22 : ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವೆಂದು ರಾಜ್ಯ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಗಡಿ ಭಾಗದಲ್ಲಿ ಕೇರಳದ ವಾಹನಗಳನ್ನು ತಪಾಸಣೆಗೊಳಪಡಿಸುತ್ತಿದ್ದಾರೆ. ಇದನ್ನೇ ನೆಪವಾಗಿಸಿಕೊಂಡಿರುವ ಕೇರಳದ ಕೆಲವು ಸಂಘಟನೆಗಳು ಕರ್ನಾಟಕ ರಾಜ್ಯದ ವಾಹಗಳನ್ನು ಗಡಿಯಲ್ಲಿ ತಡೆದು ಪ್ರತಿಭಟನೆ ನಡೆಸುತ್ತಿವೆ.
ಕೆಎಸ್ ಆರ್ ಟಿಸಿ ಬಸ್ ಗಳು ಸೇರಿದಂತೆ ಕರ್ನಾಟಕದ ಎಲ್ಲಾ ವಾಹನಗಳು ಕೇರಳವನ್ನು ಪ್ರವೇಶಿಸಲಾಗದೆ ಸಾಲುಗಟ್ಟಿ ನಿಂತಿವೆ. ಕೇರಳದ ಆಂಬ್ಯುಲೆನ್ಸ್ ಸೇರಿದಂತೆ ತುರ್ತು ವಾಹನಗಳನ್ನು, ವಿದ್ಯಾರ್ಥಿಗಳನ್ನು ಕೂಡ ಕರ್ನಾಟಕ ರಾಜ್ಯದಲ್ಲಿ ತಡೆ ಹಿಡಿಯುತ್ತಿರುವುದರಿಂದ ಕೇರಳಕ್ಕೆ ಕರ್ನಾಟಕದ ಒಂದೇ ಒಂದು ವಾಹನ ಪ್ರವೇಶಿಸಲು ಬಿಡುವುದಿಲ್ಲವೆಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದು, ಕರ್ನಾಟಕದ ವಾಹನಗಳನ್ನು ತಡೆದಿದ್ದಾರೆ.
ಕರ್ನಾಟಕ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಬೇಕು ಮತ್ತು ಸಮಸ್ಯೆಯನ್ನು ಬಗೆಹರಿಸಬೇಕೆಂದು ವಾಹನಗಳಲ್ಲಿರುವ ಕನ್ನಡಿಗರು ಒತ್ತಾಯಿಸಿದ್ದಾರೆ.