ಓಂಕಾರೇಶ್ವರ ದೇವಾಲಯದ ಇತಿಹಾಸ

February 22, 2021

ಮೂರನೇ ಲಿಂಗ ರಾಜೇಂದ್ರ ಒಡೆಯರ ಕಾಲದಲ್ಲಿ ಮಡಿಕೇರಿಯ ಪ್ರಸಿದ್ಧ ದೇವಾಲಯವಾದ ಓಂಕಾರೇಶ್ವರ ದೇಗುಲವನ್ನು ಕಟ್ಟಲು ಆರಂಭಿಸಲಾಯಿತು. 1-06-1817 ರಲ್ಲಿ ಕಟ್ಟಲು ಪ್ರರಂಭಿಸಿದ ಓಂಕಾರೇಶ್ವರ ದೇವಾಲಯ,ಎರಡು (2) ವರ್ಷ, ಒಂಬತ್ತು (9) ತಿಂಗಳು , ಇಪ್ಪತೈದು (25) ದಿನಗಳಲ್ಲಿ ಪೂರ್ಣಗೊಂಡಿತು. ಈ ದೇಗುಲ ನಿರ್ಮಾಣದ ಹಿಂದೆ ಒಂದು ಮಹತ್ವದ ಕಥೆ ಇದೆ..

1820ರಲ್ಲಿ ಎರಡನೇ ಲಿಂಗರಾಜೇಂದ್ರನು ಕಟ್ಟಿಸಿದ ಓಂಕಾರೇಶ್ವರ ದೇಗುಲ ಇಂಡೋಸಾರ್ಸನಿಕ್ ಶೈಲಿಯಲ್ಲಿರುವುದು ವಿಶೇಷ. ಇದು ನಾಲ್ಕೂ ಮೂಲೆಗಳಲ್ಲೂ ಉದ್ದನೆಯ ಗೋಪುರಗಳನ್ನು ಹೊಂದಿದ್ದು ನಡುವೆ ಬೃಹತ್ ಗುಮ್ಮಟವಿದ್ದು ಆಕರ್ಷಣೀಯವಾಗಿದೆ.

ಪುತ್ತೂರು ಕಡೆಯಿಂದ ತಾನಾಗಿ ರಾಜನಿಗೆ ತನ್ನ ಮಗಳನ್ನು ಮಾಡಿಕೊಡಲು ಬಂದ ಬ್ರಾಹ್ಮಣನ ಕನ್ಯೆಯನ್ನು ರಾಜನು ಮದುವೆಯಾಗಲು ಅಡ್ಡಿಯಾದ ಕರಣಿಕ ನೌಬ್ಬರಸ್ಸಯ್ಯನನ್ನು ರಾಜ ದಹನ ಮಾಡಿಸಿದನಂತೆ. ಅವನು ಬ್ರಹ್ಮರಕ್ಕಸನಾಗಿ ರಾಜನನ್ನು ಕಾಡಲು ಆರಂಭಿಸಿದನು. ಇದರಿಂದಾಗಿ ಬ್ರಹ್ಮಹತ್ಯಾ ದೋಷದಿಂದ ಮುಕ್ತನಾಗಲು ಜ್ಯೋತಿಷಿಗಳ, ಮಂತ್ರವಾದಿಗಳ ಹಾಗೂ ನೀಲೇಶ್ವರ ತಂತ್ರಿಗಳ ಸಲಹೆಯಂತೆ ಈ ಶಿವನ ದೇವಸ್ಥಾನವನ್ನು ನಿರ್ಮಿಸಿದನೆಂಬ ಐತಿಹ್ಯ ಇಲ್ಲುಂಟು. ಲಿಂಗರಾಜೇಂದ್ರನು ಪರಮ ಪಾವನೆ ಗಂಗೆ ಹರಿಯುವ ಮಹಾಪುಣ್ಯ ಕ್ಷೇತ್ರವಾದ ಕಾಶಿವಿಶ್ವನಾಥನ ಪುಣ್ಯ ಸ್ಥಳದಿಂದ ಶಿವಲಿಂಗವನ್ನು ಸಕಲ ಸಂಪ್ರದಾಯ ಸಹಿತ ವಿಧಿ ವತ್ತಾಗಿ ಇಲ್ಲಿಗೆ ತಂದು ಶಾಸ್ತ್ರೋಕ್ತವಾಗಿ ವ್ರತಾದಿ ಪೂಜೆ ಪುನಸ್ಕಾರಗಳ ಪ್ರಕಾರ 1820ಮಾರ್ಚ್ 26 ರಂದು ಚೈತ್ರಶುದ್ಧ ದ್ವಾದಶಿಯ ದಿನ ಈ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿದೆ. ಅಂದು ನೀಲೇಶ್ವರ ತಂತ್ರಿಗಳು ಕಾಶಿಯಿಂದ ತಂದ ಈ ಶಿವಲಿಂಗವನ್ನು ಓಂಕಾರೇಶ್ವರ ಲಿಂಗವೆಂದು ಕರೆದಿದ್ದರಿಂದ ಇದು ಓಂಕಾರೇಶ್ವರ ದೇವಸ್ಥಾನವೆಂದೇ ಹೆಸರಾಗಿದೆ.

ಎರಡನೆ ಕಥೆ ಹೀಗಿದೆ- ವೀರ ಶೈವ ಜಂಗಮನೊಬ್ಬ ರಾಜನ ಆಸ್ತಾನಕ್ಕೆ ಬಂದಾಗ ರಾಜರು ಅವರನ್ನು ಅನಾಧರಿಸಿ ಗೌರವ ನೀಡದ ಕಾರಣ ಜಂಗಮನು ರಾಜನನ್ನು ಶಪಿಸಿದನಂತೆ. ಆಗ ರಾಜನು ಪ್ರಾರ್ಥಿಸಲು,ಶಾಪದ ನಿರಸನಕ್ಕಾಗಿ ಜಂಗಮನೇ ದೇಗುಲ ಒಂದನ್ನು ನಿರ್ಮಿಸುವಂತೆ ಸಲಹೆ ನೀಡಿದನಂತೆ. ಇಂತಹ ದೇಗುಲದಲ್ಲಿ ಮುಖ್ಯ ದೇವರು ಶ್ರೀ ಓಂಕಾರೇಶ್ವರ ಪರಿವಾರದ ದೇವತೆಗಳಾದ ಗಣಾದೀಶ್ವರ ,ಕುಮಾರೇಶ್ವರ , ನಂದೀಶ್ವರ ಹೀಗೆ ಶಿವನ ಸುತರು ಶಿವ ಲಿಂಗ ಇಲ್ಲಿ ನೆಲೆನಿಂತಿದೆ. ಈ ದೈವ ಸಮೂಹಕ್ಕೆ ದೈನಂದಿನ ತ್ರಿಕಾಲ ಪೂಜೆ ,ನೈವೇದ್ಯ ,ನಂದಾದೀಪ ,ಅಭಿಷೇಕ ,ಅರ್ಚನೆ ,ಅಮೃತ ಪಡಿಯಿಂದ ಹಿಡಿದ ತೀಥಿ , ವಾರ , ಪಕ್ಷ ,ಮಾಸಿಕ ,ವಾರ್ಷಿಕ ಹಬ್ಬ ಉತ್ಸವಾದಿಗಳು ನಡೆಯುತ್ತವೆ. ದೇಗುಲದ ದೇವಪರಿವಾರಕ್ಕೆ ಚೈತ್ರ ಮಾಸದಿಂದ ವೈಶಾಖ್ ಮಾಸದ ವರೆಗೆ ವಸಂತ ಪೂಜೆ ,ನವರಾತ್ರಿ , ಕಾರ್ತಿಕ ಮಾಸ ಪೂಜೆ ,ದೀಪಾವಳಿ , ಶಿವರಾತ್ರಿ ,ದೀಪೋತ್ಸವ ಇತ್ಯಾದಿ ಮಾಸಿಕ ಪೂಜೆ ಪುನಸ್ಕಾರಗಳಿಗೆ ರಾಜರು ಅಡುಗೆ ಬಟ್ಟರು ,ಅರ್ಚಕರು ,ಪುರೋಹಿತ ವರ್ಗ ,ಪಾದ್ರಿಗಳು ,ಪಾರುವತ್ಸಗಾರ ,ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ,ತಾಳ ಮೇಳದವರು ,ಶಂಖ್ ಜಾಗಟೆ ,ಡೋಲು ವಾದ್ಯದವರು , ಮುಂತಾದವರನ್ನು ನೇಮಿಸುತ್ತಿದ್ದರು.

ರಾಜರ ಕಾಲದಲ್ಲಿ ಉಪಯೋಗಿಸುತ್ತಿದ್ದ ನಾಣ್ಯಗಳ ಸಂಕೇತದಲ್ಲಿ 9 ಎಂಬುದು ವರಹದ ಚಿಹ್ನಯಾಗಿ ಬಳಕೆಯಾಗುತ್ತಿತ್ತು. ಓಂಕಾರೇಶ್ವರ ದೇವಾಲಯದಲ್ಲಿ ನಂದಾದೀಪಕ್ಕೆ ಹಸುವಿನ ತುಪ್ಪವನ್ನೇ ಬಳಸಲಾಗುತ್ತಿತ್ತು.


error: Content is protected !!