ನಗರದ ಹೃದಯ ಭಾಗದಲ್ಲೇ ನಗರ ಠಾಣೆ ಇರಲಿ : ಎಸ್‍ಪಿಗೆ ಮನವಿ ಸಲ್ಲಿಸಿದ ಹರೀಶ್ ಜಿ.ಆಚಾರ್ಯ

February 22, 2021

ಮಡಿಕೇರಿ ಫೆ.22 : ಗ್ರಾಮಾಂತರ ಠಾಣೆ ಕಟ್ಟಡ ಇರುವ ಪ್ರದೇಶಕ್ಕೆ ಸ್ಥಳಾಂತರಗೊಂಡಿರುವ ಮಡಿಕೇರಿ ನಗರ ಪೊಲೀಸ್ ಠಾಣೆಯನ್ನು ನಗರದ ಹೃದಯ ಭಾಗದಲ್ಲೇ ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿ ಪೀಪಲ್ಸ್ ಮೂಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ನಗರದಿಂದ ದೂರದ ಸ್ಥಳಕ್ಕೆ ನಗರ ಠಾಣೆ ಸ್ಥಳಾಂತರಗೊಂಡಿರುವುದರಿಂದ ದೂರುದಾರರಿಗೆ ಕಷ್ಟವಾಗುತ್ತಿದೆ, ಅಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೂ ಅಡಚಣೆಯಾಗುತ್ತಿದೆ ಎಂದು ಅವರು ಎಸ್‍ಪಿ ಗಮನ ಸೆಳೆದರು.
ಜನನಿಬಿಡ ಪ್ರದೇಶದಲ್ಲಿ ಪೊಲೀಸ್ ಠಾಣೆಯೊಂದಿದ್ದರೆ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಪೊಲೀಸರ ಆತಂಕವಿರುತ್ತದೆ. ಸಾರ್ವಜನಿಕರಿಗೆ ತೊಂದರೆಗಳು ಎದುರಾದಾಗ ತಕ್ಷಣ ಬಂದು ದೂರು ನೀಡಲು ಅನುಕೂಲವಾಗುತ್ತದೆ. ಮದ್ಯ ವ್ಯಸನಿಗಳು ಮತ್ತು ಗಾಂಜಾ ಅಮಲಿನಲ್ಲಿರುವವರ ಮೇಲೆ ನಿಗಾ ಇಡುವುದರಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಮಡಿಕೇರಿ ನಗರಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಈ ಹಿಂದೆ ಇದ್ದ ಪ್ರದೇಶದಲ್ಲೇ ನಗರ ಠಾಣೆ ಇರುವುದು ಸೂಕ್ತವೆಂದು ಹರೀಶ್ ಜಿ.ಆಚಾರ್ಯ ಹೇಳಿದರು.
ಮುಖ್ಯ ರಸ್ತೆಯಲ್ಲಿದ್ದ ಠಾಣೆಯ ಕಟ್ಟಡವನ್ನು ದುರಸ್ತಿ ಪಡಿಸುವ ಬಗ್ಗೆ ಮಾಹಿತಿ ದೊರೆತ್ತಿದೆ. ಆದರೆ ಈ ಕಾಮಗಾರಿ ಮುಗಿಯುವವರೆಗೆ ನಗರದ ಹೃದಯ ಭಾಗದಲ್ಲೇ ತಾತ್ಕಾಲಿಕ ಕಟ್ಟಡ ಅಥವಾ ಖಾಸಗಿ ಕಟ್ಟಡದಲ್ಲಿ ನಗರ ಠಾಣೆಯನ್ನು ಆರಂಭಿಸಬೇಕೆಂದು ಅವರು ಮನವಿ ಮಾಡಿದರು.

error: Content is protected !!