ಏ. 10 ರಿಂದ ಅಮ್ಮತ್ತಿಯಲ್ಲಿ ಜಿಲ್ಲಾ ಮಟ್ಟದ ಲೀಗ್ ಫುಟ್ಬಾಲ್ ಪಂದ್ಯಾವಳಿ

22/02/2021

ಮಡಿಕೇರಿ ಫೆ. 22 : ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಜಿಲ್ಲಾ ಮಟ್ಟದ ಲೀಗ್ ಫುಟ್ಬಾಲ್ ಪಂದ್ಯಾಟವು ಈ ಬಾರಿ ಅಮ್ಮತ್ತಿಯಲ್ಲಿರುವ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮೈದಾನದಲ್ಲಿ ಏಪ್ರಿಲ್ 10 ರಿಂದ 25 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಮೋಹನ್ ಅಯ್ಯಪ್ಪ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಬಾರಿಯ ಪಂದ್ಯಾವಳಿಯನ್ನು ಅಮ್ಮತ್ತಿಯ ಮಿಲನ್ಸ್ ಫುಟ್ಬಾಲ್ ಕ್ಲಬ್ ನ ಸಹಯೋಗದೊಂದಿಗೆ ನಡೆಸಲು ತೀರ್ಮಾನಿಸಲಾಗಿದೆ.
ಜಿಲ್ಲೆಯ ಒಟ್ಟು 16 ತಂಡಗಳು‌ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದು, 4 ತಂಡಗಳನ್ನು 4 ಗುಂಪುಗಳಾಗಿ ವಿಂಗಡಣೆ ಮಾಡಿ, ಪ್ರತೀ ತಂಡ ತಲಾ ಮೂರು ಪಂದ್ಯಗಳನ್ನು ಆಡಬೇಕಾಗಿದೆ.
ಪ್ರತೀ ಗುಂಪಿನಲ್ಲಿ ಅತೀ ಹೆಚ್ಚು‌ ಅಂಕ ಗಳಿಸಿದ ತಲಾ ಎರಡು ತಂಡಗಳನ್ನು ಆಯ್ಕೆಮಾಡಿ, ಕ್ವಾರ್ಟರ್ ಹಾಗೂ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯವನ್ನು ಆಡಿಸಲಾಗುತ್ತದೆ ಎಂದು ಮೋಹನ್ ಅಯ್ಯಪ್ಪ ತಿಳಿಸಿದರು.

ಫೈನಲ್ ಪಂದ್ಯದ ಸಮಾರೋಪ‌ ಸಮಾರಂಭಕ್ಕೆ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ಎನ್.ಎ ಹ್ಯಾರಿಸ್, ಕಾರ್ಯದರ್ಶಿ ಸತ್ಯನಾರಾಯಣ ಹಾಗೂ ಭಾರತ ತಂಡದ ಮಾಜಿ ಆಟಗಾರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಫುಟ್ಬಾಲ್ ತಂಡಕ್ಕೆ ಕೀರ್ತಿ ತಂದುಕೊಟ್ಟ ಕೇರಳದ ಐ.ಎಮ್ ವಿಜಯನ್ ಭಾಗವಹಿಸಲಿದ್ದಾರೆ ಎಂದು ಅಮ್ಮತ್ತಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೋಹನ್ ಅಯ್ಯಪ್ಪ ಮಾಹಿತಿ ನೀಡಿದ್ದಾರೆ.

ಅಲ್ಲದೇ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ವತಿಯಿಂದ ಅಂದಾಜು 25 ಸಾವಿರ ರೂ ವೆಚ್ಚದಲ್ಲಿ ಅಮ್ಮತ್ತಿಯ ಫುಟ್ಬಾಲ್ ಮೈದಾನಕ್ಕೆ ನೂತನ ಗೋಲು ಪೆಟ್ಟಿಗೆಯನ್ನು ಅವಳವಡಿಸಲಾಗುತ್ತಿದೆ ಎಂದು‌ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಮೋಹನ್ ಅಯ್ಯಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೋಹನ್ ಅಯ್ಯಪ್ಪ