ಹುಲಿ ಸೆರೆಗೆ ಕಿರುಗೂರು ಗ್ರಾ.ಪಂ ಒತ್ತಾಯ : ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಕೆ

ಮಡಿಕೇರಿ ಫೆ.22 : ಎರಡು ಅಮಾಯಕ ಜೀವಗಳು ಮತ್ತು ಹಸುಗಳನ್ನು ಬಲಿ ತೆಗೆದುಕೊಂಡಿರುವ ಹುಲಿಯನ್ನು ತಕ್ಷಣ ಸೆರೆ ಹಿಡಿಯಬೇಕು ಹಾಗೂ ವನ್ಯಜೀವಿಗಳ ಹಾವಳಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಕ್ಷಿಣ ಕೊಡಗಿನ ಕಿರುಗೂರು ಗ್ರಾ.ಪಂ ಪ್ರತಿನಿಧಿಗಳು ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಆರ್ಎಫ್ಒ ರಾಜಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರಮುಖರು ಇಂದು ಬೆಳಗ್ಗೆ ಎರಡು ಹಸುಗಳನ್ನು ಹುಲಿ ಕೊಂದು ಹಾಕಿದೆ, ಅಲ್ಲದೆ ಹುಲಿಯನ್ನು ನೋಡಿದ ಬಾಲಕಿಯೊಬ್ಬಳು ಮೂರ್ಛೆ ಹೋಗಿದ್ದಾಳೆ. ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕದ ವಾತಾವರಣವಿದ್ದು, ತಕ್ಷಣ ಹುಲಿಯನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು.
ವನ್ಯಜೀವಿಗಳ ದಾಳಿಯಿಂದ ಬೆಳೆ ನಷ್ಟವಾಗುತ್ತಿರುವುದಲ್ಲದೆ, ಜಾನುವಾರು ಮತ್ತು ಮಾನವ ಜೀವ ಹಾನಿಯಾಗುತ್ತಿದೆ. ಈ ಬೆಳವಣಿಗೆಯನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಪ್ರಾಣಿಗಳ ದಾಳಿಯನ್ನು ಶಾಶ್ವತವಾಗಿ ತಡೆಯಬೇಕೆಂದು ಮನವಿ ಮಾಡಿದರು.
ಗ್ರಾ.ಪಂ ಅಧ್ಯಕ್ಷ ಪುತ್ತಮನೆ ಜೀವನ್, ಸದಸ್ಯರುಗಳಾದ ಚೆಪ್ಪುಡಿರ ರಾಕೇಶ್ ದೇವಯ್ಯ, ಕೋಳಿಮಾಡ ಕಟ್ಟಿ, ಪಿಡಿಒ ಕುಪ್ಪಂಡ ಗಯ, ಗ್ರಾಮಸ್ಥರಾದ ಪೆಮ್ಮಂಡ ಮಧು, ಚಿರಿಯಪಂಡ ಕೀರ್ತನ್, ಚೀರಂಡ ಕಂದ, ಚೀರಂಡ ಕಿಟ್ಟು, ಆಲೇಮಾಡ ಸುಧೀರ್, ಕನ್ನಿ ಸೋಮಣ್ಣ, ಚೊಟ್ಟೆಕಪಾಲಂಡ ಮನು, ಚೆಪ್ಪುಡಿರ ರಾಜೇಶ್, ಪೆಮ್ಮಂಡ ಅಯ್ಯಪ್ಪ, ಕೊಕ್ಕೆಂಗಡ ಸಚಿನ್, ಪೆಮ್ಮಂಡ ಅಪ್ಪಿ, ಚೆಪ್ಪುಡಿರ ರೋಷನ್ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.
::: ಎಚ್ಚರಿಕೆಯಿಂದಿರಲು ಮನವಿ :::
ಹುಲಿ ಸಂಚಾರ ನಿರಂತರವಾಗಿರುವುದರಿಂದ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಕಿರುಗೂರು ಗ್ರಾ.ಪಂ ಅಧ್ಯಕ್ಷ ಪುತ್ತಮನೆ ಜೀವನ್ ಮನವಿ ಮಾಡಿದ್ದಾರೆ. ಹುಲಿ ಕಂಡು ಬಂದಲ್ಲಿ ಈ ಅರಣ್ಯ ಅಧಿಕಾರಿಗಳ ಮೊ.ಸಂ : ರವಿಕಿರಣ್ 89043 88601, ಬೋಪಣ್ಣ 94809 92292 ಹಾಗೂ ರಾಜಪ್ಪ 97317 15292 ನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.