ಕೊಡಗಿನ ಗಡಿಭಾಗದಲ್ಲಿ ಕಟ್ಟೆಚ್ಚರ : ಚೆಕ್‍ ಪೋಸ್ಟ್ ಗಳಿಗೆ ಡಿಸಿ, ಎಸ್‍ಪಿ ಭೇಟಿ

February 22, 2021

ಮಡಿಕೇರಿ ಫೆ.22 : ಜಿಲ್ಲಾಧಿಕಾರಿ ಚಾರುಲತ ಸೋಮಲ್ ಮತ್ತು ಜಿಲ್ಲಾ SP ಕ್ಷಮಾ ಮಿಶ್ರ ಅವರು ಕರಿಕೆ ಹಾಗೂ ಸಂಪಾಜೆ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೇರಳ ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆ ಗಡಿಭಾಗದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ರಾಜ್ಯದಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದು, ಕೊಡಗು ಜಿಲ್ಲೆಯ ಗಡಿಭಾಗದ ಜಿಲ್ಲೆಗೆ ಸೇರಿದ ಪ್ರದೇಶಗಳಲ್ಲಿ ಸೋಂಕಿತ ಪ್ರಕರಣಗಳು ಏರಿಕೆಯಾಗುತ್ತಿದೆ.
ಈ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲೆಗೆ ನೆರೆಯ ರಾಜ್ಯವಾದ ಕೇರಳದಿಂದ ಜಿಲ್ಲೆಯ ಗಡಿ ಭಾಗಗಳಾದ ಕುಟ್ಟ, ಮಾಕುಟ್ಟ, ಪೆರುಂಬಾಡಿ, ಕರಿಕೆ, ಕುಶಾಲನಗರ ಮತ್ತು ಸಂಪಾಜೆ ಚೆಕ್‍ಪೋಸ್ಟ್‍ಗಳ ಮುಖಾಂತರ ಇತರೆ ಎಲ್ಲಾ ಮಾರ್ಗಗಳ ಮೂಲಕ ಆಗಮಿಸುವವರು ಕಡ್ಡಾಯವಾಗಿ 72 ಗಂಟೆಗಳ ಒಳಗಿನ ಕೋವಿಡ್-19 ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದನ್ನು ಪರಿಶೀಲಿಸುವುದು ಸೂಕ್ತವೆಂದು ಕಂಡುಬಂದ ಕಾರಣ ಆದೇಶ ಹೊರಡಿಸಲಾಗಿದೆ. ಈ ಕಾರ್ಯದ ಸಂಬಂಧ ಕಾರ್ಯಗಳನ್ನು ನಿರ್ವಹಿಸಲು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಆದೇಶಿಸಲಾಗಿದೆ.
ಮಡಿಕೇರಿ, ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಡಿಕೇರಿ ಮತ್ತು ವಿರಾಜಪೇಟೆ, ಸೋಮವಾರಪೇಟೆ ತಾ. ತಹಶೀಲ್ದಾರರು, ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕರು, ಇವರು ಕುಟ್ಟ, ಮಾಕುಟ್ಟ, ಪೆರುಂಬಾಡಿ, ಕರಿಕೆ, ಕುಶಾಲನಗರ ಮತ್ತು ಸಂಪಾಜೆ ಚೆಕ್‍ಪೋಸ್ಟ್‍ಗಳ ಮುಖಾಂತರ ಹಾಗೂ ಇತರೆ ಯಾವುದೇ ಮಾರ್ಗದ ಮೂಲಕ ಕೇರಳ ರಾಜ್ಯದಿಂದ ಜಿಲ್ಲೆಗೆ ಆಗಮಿಸುವವರು ಕನಿಷ್ಟ 72 ಗಂಟೆಗಳ ಒಳಗೆ ಪಡೆದಿರುವ ಕೋವಿಡ್-19 ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದನ್ನು ಪರಿಶೀಲಿಸುವ ನಿಟ್ಟಿನಲ್ಲಿ ಚೆಕ್‍ಪೋಸ್ಟ್‍ಗಳಲ್ಲಿ ದಿನದ 24 ಗಂಟೆ ತಲಾ 8 ಸಿಬ್ಬಂದಿಯಂತೆ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವುದು.
ಪಾಳಿಯ ಅವಧಿಯು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ, ಮಧ್ಯಾಹ್ನ 2 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಮತ್ತು ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗೆ 8 ಗಂಟೆಯವರೆಗೆ ಇರತಕ್ಕದ್ದು. ಪ್ರತಿ ಇಲಾಖೆಯಿಂದ ಪ್ರತಿ ಪಾಳಿಗೆ ತಲಾ ಇಬ್ಬರು ಅಧಿಕಾರಿ, ನೌಕರರನ್ನು ನಿಯೋಜಿಸುವುದು.
ಮಡಿಕೇರಿ ಮತ್ತು ವಿರಾಜಪೇಟೆ ತಹಶೀಲ್ದಾರರು ಚೆಕ್‍ಪೋಸ್ಟ್‍ನಲ್ಲಿ ತಪಾಸಣೆ ಕಾರ್ಯಕ್ಕಾಗಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇವರು ಆರೋಗ್ಯ ಇಲಾಖೆ ವತಿಯಿಂದ ಮೊಬೈಲ್ ಯೂನಿಟ್ ತಂಡ ರಚಿಸಿ ಕುಟ್ಟ, ಮಾಕುಟ್ಟ, ಕರಿಕೆ, ಕುಶಾಲನಗರ ಮತ್ತು ಸಂಪಾಜೆ ಚೆಕ್‍ಪೋಸ್ಟ್‍ಗಳ ಬಳಿ ಹಾಗೂ ಜಿಲ್ಲೆಯ ಪ್ರವಾಸಿ, ಪ್ರೇಕ್ಷಣೀಯ ಸ್ಥಳಗಳು ಹಾಗೂ ಅಧಿಕ ಜನ ಸಂದಣಿ ಇರುವ ಪ್ರದೇಶ, ಸಂತೆ ಮುಂತಾದ ಸ್ಥಳಗಳಲ್ಲಿ ಕೋವಿಡ್-19 ರ್ಯಾಂಡಮ್ ಟೆಸ್ಟ್ ನಡೆಸುವುದು.
ಕೇರಳ ರಾಜ್ಯದ ಗಡಿಭಾಗದಲ್ಲಿರುವ ಕೊಡಗು ಜಿಲ್ಲೆಗೆ ಸೇರಿದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸುವುದು.
ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು, ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಆರಕ್ಷಕ ಉಪಾಧೀಕ್ಷಕರು, ಸಂಬಂಧಪಟ್ಟ ಕಾರ್ಯವ್ಯಾಪ್ತಿಯ ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಲಾಡ್ಜ್ ಮುಂತಾದವುಗಳಿಗೆ ವಸತಿ ಸೌಕರ್ಯಕ್ಕಾಗಿ ಆಗಮಿಸುವವರು ಕನಿಷ್ಠ 72 ಗಂಟೆಗಳ ಒಳಗೆ ಪಡೆದಿರುವ ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ್‍ನ್ನು ಹೊಂದಿರುವ ಬಗ್ಗೆ ಸಂಬಂಧಪಟ್ಟ ಮಳಿಗೆಗಳ ಮಾಲೀಕರು ಅಥವಾ ವ್ಯವಸ್ಥಾಪಕರು ಖಚಿತಪಡಿಸಿಕೊಳ್ಳುವುದು.
ಈ ಬಗ್ಗೆ ಸ್ಥಳೀಯ ಕಾರ್ಯವ್ಯಾಪ್ತಿಯ ಕಂದಾಯ, ಗ್ರಾಮ ಪಂಚಾಯತ್ ಆರಕ್ಷಕ ಇಲಾಖೆಯ ಸಿಬ್ಬಂದಿಗಳನ್ನು ಒಳಗೊಂಡ ತಂಡ ರಚಿಸಿ, ಅನಿರೀಕ್ಷಿತ ಭೇಟಿ ನೀಡಿ, ತಪಾಸಣೆ ಕೈಗೊಂಡು, ಆದೇಶ ಪಾಲನೆಯಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವುದು.
ಮಡಿಕೇರಿ ಅಬಕಾರಿ ಉಪಾಯುಕ್ತರು, ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ಆರಕ್ಷಕ ಉಪಾಧೀಕ್ಷಕರು, ಸಂಬಂಧಪಟ್ಟ ಕಾರ್ಯ ವ್ಯಾಪ್ತಿಯ ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕೇರಳ ರಾಜ್ಯದ ಗಡಿಭಾಗಗಳಲ್ಲಿನ ಜಿಲ್ಲೆಗೆ ಸೇರಿದ ಪ್ರದೇಶಗಳಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್, ಸ್ಟಾರ್ ಹೋಟೆಲ್ ಮುಂತಾದವುಗಳಿಗೆ ಆತಿಥ್ಯಕ್ಕಾಗಿ ಕೇರಳ ರಾಜ್ಯದಿಂದ ಸಾರ್ವಜನಿಕರು ಆಗಮಿಸುತ್ತಿದ್ದಲ್ಲಿ, ಅಂತಹ ಮಳಿಗೆಗಳ ಮಾಲೀಕರು ಅಥವಾ ವ್ಯವಸ್ಥಾಪಕರು ಗಮನಹರಿಸಿ ಆಗಮಿಸುವವರು ಕಡ್ಡಾಯವಾಗಿ ಕನಿಷ್ಠ 72 ಗಂಟೆಗಳ ಒಳಗೆ ಪಡೆದಿರುವ ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ್‍ನ್ನು ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
ಈ ಬಗ್ಗೆ ಸ್ಥಳೀಯ ಕಾರ್ಯವ್ಯಾಪ್ತಿಯ ಕಂದಾಯ, ಗ್ರಾಮ ಪಂಚಾಯತ್, ಅಬಕಾರಿ, ಆರಕ್ಷಕ ಇಲಾಖೆಯ ಸಿಬ್ಬಂದಿಗಳನ್ನು ಒಳಗೊಂಡ ತಂಡ ರಚಿಸಿ, ಅನಿರೀಕ್ಷಿತ ಭೇಟಿ ನೀಡಿ, ತಪಾಸಣೆ ಕೈಗೊಂಡು, ಆದೇಶ ಪಾಲನೆಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
ಮಡಿಕೇರಿ, ವಿರಾಜಪೇಟೆ(ಪೊನ್ನಂಪೇಟೆ) ಮತ್ತು ಸೋಮವಾರಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಹಶೀಲ್ದಾರರು, ಸಂಬಂಧಪಟ್ಟ ಕಾರ್ಯವ್ಯಾಪ್ತಿಯ ಗ್ರಾಮೀಣ ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕೇರಳ ರಾಜ್ಯದ ಗಡಿಭಾಗದಲ್ಲಿರುವ ಕೊಡಗು ಜಿಲ್ಲೆಗೆ ಸೇರಿದ ಗ್ರಾ.ಪಂ. ವ್ಯಾಪ್ತಿಯಲ್ಲಿನ ಸಾರ್ವಜನಿಕರು ಕೂಡಲೇ ಕಡ್ಡಾಯವಾಗಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸುವುದು.
ಕೋವಿಡ್-19 ಮಾರ್ಗಸೂಚಿಯಂತೆ ಮುಖಗವಸು ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮತ್ತಿತರ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸುವಂತೆ ಮತ್ತು ಸಾರ್ವಜನಿಕರು ತುರ್ತು ವಿಚಾರದ ಹೊರತಾಗಿ ಅನಾವಶ್ಯಕವಾಗಿ ಆಗಾಗ್ಗೆ ಕೇರಳಕ್ಕೆ ಸಂಚರಿಸುವುದನ್ನು ಕಡಿಮೆಗೊಳಿಸಲು ಅರಿವು ಮೂಡಿಸುವುದು.
ಕುಟ್ಟ, ಮಾಕುಟ್ಟ, ಪೆರುಂಬಾಡಿ, ಕರಿಕೆ, ಕುಶಾಲನಗರ ಮತ್ತು ಸಂಪಾಜೆ ಚೆಕ್‍ಪೋಸ್ಟ್‍ಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮೇಲುಸ್ತುವಾರಿಯನ್ನು ಸ್ಥಳೀಯ ಕಾರ್ಯವ್ಯಾಪ್ತಿಯ ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮುಖ್ಯಾಧಿಕಾರಿಯವರು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಚಾರುಲತ ಸೋಮಲ್ ಅವರು ತಿಳಿಸಿದ್ದಾರೆ.

error: Content is protected !!