ವಸತಿ ಶಾಲೆಗಳ ಪ್ರವೇಶಾತಿ ಪರೀಕ್ಷೆ : ಫೆ. 24 ರಂದು ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ

February 23, 2021

ಮಡಿಕೇರಿ ಫೆ.23 : ಕೊಡಗು ಜಿಲ್ಲೆಯಲ್ಲಿ ಫೆಬ್ರವರಿ, 24 ರಂದು ನಡೆಯಲಿರುವ 2021ರ ವಸತಿ ಶಾಲೆಗಳ ಪ್ರವೇಶಾತಿ ಪರೀಕ್ಷೆಗಳನ್ನು ಯಾವುದೇ ಅವ್ಯವಹಾರಗಳಿಲ್ಲದಂತೆ ಸುಗಮವಾಗಿ ನಡೆಸುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ರಡಿ ದತ್ತವಾದ ಅಧಿಕಾರದಂತೆ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೋಮವಾರವಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೋಮವಾರಪೇಟೆ ಬಿ.ಟಿ.ಸಿ. ಗೌರಮ್ಮ ಪದವಿ ಪೂರ್ವ ಕಾಲೇಜು ಮತ್ತು ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಈ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿಷೇಧಿತ ಸ್ಥಳ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಚಾರುಲತ ಸೋಮಲ್ ಅವರು ಆದೇಶಿಸಿದ್ದಾರೆ.
ನಿಷೇಧಿತ ವಲಯದಲ್ಲಿ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡುವುದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು, ಇನ್ನಾವುದೇ ವಸ್ತುಗಳನ್ನು ಹಂಚುವುದು, ರವಾನಿಸುವುದು ಮತ್ತಿತರ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಿದೆ.
ನಿಷೇಧಿತ ವಲಯದಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ಕೊಂಡು ಹೋಗುವುದನ್ನು ಹಾಗೂ ಇನ್ನಿತರ ಮಾರಕ ಆಯುಧಗಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ. ನಿಷೇಧಿತ ವಲಯದಲ್ಲಿ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು, ಮಾಹಿತಿಯನ್ನು ರವಾನಿಸುವ, ತಿಳಿಸುವ ಸಲುವಾಗಿ ಸಂಜ್ಞೆಗಲನ್ನು ಮಾಡುವುದು ಮುಂತಾದ ಕ್ರಿಯೆಗಳಲ್ಲಿ ತೊಡಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷಾ ಅವಧಿಯವರೆಗೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸುವುದನ್ನು ಮತ್ತು ಈ ವ್ಯಾಪ್ತಿಯಲ್ಲಿ ಧ್ವನಿವರ್ಧಕ ಬಳಕೆ ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಚಾರುಲತ ಸೋಮಲ್ ಅವರು ತಿಳಿಸಿದ್ದಾರೆ.

error: Content is protected !!