ಒಕ್ಕಲಿಗರ ಬೇಡಿಕೆಗಳನ್ನು ತಕ್ಷಣ ಈಡೇರಿಸಿ : ಕೊಡಗು ಗೌಡ ಫೆಡರೇಷನ್ ಒತ್ತಾಯ

February 23, 2021

ಮಡಿಕೇರಿ ಫೆ.23 : ರಾಜ್ಯದ ಒಕ್ಕಲಿಗ ಸಮುದಾಯದ ಅಭಿವೃದ್ಧಿಗಾಗಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಬೇಕು, ಸರ್ಕಾರದ ಸೌಲಭ್ಯ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆದಿ ಚುಂಚನಗಿರಿ ಪೀಠಾಧಿಪತಿಗಳಾದ ಶ್ರೀನಿರ್ಮಲಾನಂದ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಮುಖರು ತೆಗೆದುಕೊಂಡಿರುವ ನಿರ್ಣಯಗಳಿಗೆ ಕೊಡಗು ಗೌಡ ಫೆಡರೇಷನ್ ಬದ್ಧವಾಗಿದೆ ಎಂದು ಫೆಡರೇಷನ್ ನ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ ತಿಳಿಸಿದ್ದಾರೆ.
ಒಕ್ಕಲಿಗ ಸಮುದಾಯದಲ್ಲಿ ಸಾಕಷ್ಟು ಕುಟುಂಬಗಳು ಸಂಕಷ್ಟದ ಬದುಕು ಸಾಗಿಸುತ್ತಿದ್ದು, ಸಮುದಾಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಅನಿವಾರ್ಯವಾಗಿದೆ. ಅಲ್ಲದೆ ಒಕ್ಕಲಿಗರ ಅಭಿವೃದ್ಧಿಗಾಗಿ ಒಂದು ಸಾವಿರ ಕೋಟಿ ರೂ.ಗಳನ್ನು ಮೀಸಲಿಡಬೇಕು. ಪ್ರವರ್ಗ 3ಎ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.10 ಕ್ಕೆ ಏರಿಸುವುದರೊಂದಿಗೆ ಮೀಸಲಾತಿ ಸೌಲಭ್ಯ ನಗರ ಪ್ರದೇಶದ ಒಕ್ಕಲಿಗರಿಗೂ ಮತ್ತು ಒಕ್ಕಲಿಗ ಉಪಜಾತಿ ಜನತೆಗೂ ಲಭ್ಯವಾಗಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಗಿದೆ. ಕೊಡಗು ಗೌಡ ಫೆಡರೇಷನ್ ನ ಪ್ರತಿನಿಧಿಗಳು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದು ಈ ಬೇಡಿಕೆಗಳಿಗೆ ಅನುಮೋದನೆ ಸೂಚಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತುಮಕೂರಿನ ನಂಜಾವಧೂತ ಸ್ವಾಮೀಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಸಚಿವರುಗಳಾದ ಆರ್.ಅಶೋಕ್, ನಾರಾಯಣಗೌಡ, ಗೋಪಾಲಯ್ಯ, ಶಾಸಕರುಗಳು, ನಿವೃತ್ತ ಹಿರಿಯ ಒಕ್ಕಲಿಗ ಅಧಿಕಾರಿಗಳು ಹಾಗೂ ಒಕ್ಕಲಿಗ ಸಂಘದ ಪ್ರಮುಖರು ಸಭೆಯಲ್ಲಿ ಭಾಗವಹಿಸಿ ಒಕ್ಕಲಿಗ ಸಮುದಾಯದ ಬೇಡಿಕೆಗಳ ಬಗ್ಗೆ ಚರ್ಚಿಸಲಾಗಿದೆ. ನಂತರ ಸಚಿವರುಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿರುವ ಸೂರ್ತಲೆ ಆರ್.ಸೋಮಣ್ಣ, ಒಕ್ಕಲಿಗರ ಬೇಡಿಕೆಗಳನ್ನು ತಕ್ಷಣ ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.

error: Content is protected !!