ಹುಲಿ ದಾಳಿ : ಕಾನೂನು ಕೈಗೆತ್ತಿಕೊಳ್ಳುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಲಿ : ಎಂಎಲ್‍ಸಿ ವೀಣಾಅಚ್ಚಯ್ಯ ಒತ್ತಾಯ

February 23, 2021

ಮಡಿಕೇರಿ ಫೆ.23 : ನಿರಂತರ ಹುಲಿದಾಳಿಯಿಂದ ಜಿಲ್ಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಅಮಾಯಕರ ಜೀವ ಬಲಿಯಾದ ನಂತರ ಜನ ಸಹನೆ ಕಳೆದುಕೊಳ್ಳುವ ಹಂತಕ್ಕೆ ಬಂದು ತಲುಪಿದ್ದಾರೆ ಎಂದು ತಿಳಿಸಿರುವ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಅವರು, ಕಾನೂನು ಕೈಗೆತ್ತಿಕೊಳ್ಳುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹುಲಿದಾಳಿಯನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು. ಸರ್ಕಾರದಿಂದ ವನ್ಯಜೀವಿಗಳ ದಾಳಿಯನ್ನು ತಡೆಯಲು ಸಾಧ್ಯವಾಗದಿದ್ದಲ್ಲಿ ಜನರೇ ಕೋವಿಯನ್ನು ಕೈಗೆ ತೆಗೆದುಕೊಳ್ಳುವ ಆತಂಕವಿದೆ. ಕಾಡು ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ, ಆದರೆ ಮಾನವ ಜೀವಕ್ಕೇ ಕುತ್ತು ಬಂದಾಗ ಹುಲಿಯನ್ನು ನೋಡಿಕೊಂಡು ಸುಮ್ಮನಿರಬೇಕೆ ಎಂದು ಪ್ರಶ್ನಿಸಿದರು. ವನ್ಯಜೀವಿಗಳ ದಾಳಿಯನ್ನು ನಿಯಂತ್ರಿಸಲು ಸರ್ಕಾರದಿಂದ ಸಾಧ್ಯವಾಗದಿದ್ದಲ್ಲಿ ಗುಂಡು ಹಾರಿಸಲು ಗ್ರಾಮಸ್ಥರಿಗೆ ಅವಕಾಶ ನೀಡಿ ಎಂದು ಒತ್ತಾಯಿಸಿದರು.
ದಕ್ಷಿಣ ಕೊಡಗಿನಲ್ಲಿ ಹುಲಿಗಳ ದಾಳಿಗೆ ನೂರಾರು ಹಸುಗಳು ಸಾವಿಗೀಡಾಗಿರುವುದಲ್ಲದೆ ಇಬ್ಬರು ಅಮಾಯಕರ ಜೀವ ಬಲಿಯಾಗಿದೆ. ಇಲ್ಲಿನ ಜನರು ಆಕ್ರೋಶಭರಿತರಾಗಿ ಕೋವಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಸರ್ಕಾರ ಮಾತ್ರ ಕಣ್ಣು, ಕಿವಿ ಇಲ್ಲದಂತೆ ಜಾಣ ಮೌನಕ್ಕೆ ಶರಣಾಗಿದೆ. ಅರಣ್ಯ ಸಚಿವರಿಗೆ ಕರೆ ಮಾಡಿದರೆ ಮಾತನಾಡುವ ಸೌಜನ್ಯವನ್ನು ತೋರುತ್ತಿಲ್ಲ. ಕೊಡಗಿಗೆ ಬರುವ ಎಲ್ಲಾ ಅರಣ್ಯ ಸಚಿವರುಗಳು ರಾಜಕಾರಣಿಗಳು ಮತ್ತು ಅಧಿಕಾರಿಗಳ ಜೊತೆಯಲ್ಲಿರುತ್ತಾರೆಯೇ ಹೊರತು ವನ್ಯಜೀವಿಗಳಿಂದ ಸಂಕಷ್ಟ ಎದುರಿಸುತ್ತಿರುವ ಗ್ರಾಮಸ್ಥರು ಹಾಗೂ ಬೆಳೆಗಾರರೊಂದಿಗೆ ಸಭೆ ನಡೆಸುತ್ತಿಲ್ಲ ಎಂದು ವೀಣಾಅಚ್ಚಯ್ಯ ಆರೋಪಿಸಿದರು.
ಬೆಂಗಳೂರಿನಲ್ಲಿ ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತಿರುವ ಹಿರಿಯ ಅರಣ್ಯ ಅಧಿಕಾರಿಗಳು ಕೊಡಗಿಗೆ ಬಂದು ಇಲ್ಲಿನ ಸ್ಥಿತಿಗತಿಯನ್ನು ಅವಲೋಕಿಸಬೇಕು, ಮಾನವ ಜೀವಹಾನಿಯಾದರೆ ಪರಿಹಾರದ ಮೊತ್ತ ರೂ.25 ಲಕ್ಷ ನೀಡಬೇಕು, ವನ್ಯಜೀವಿಗಳ ದಾಳಿಯಿಂದ ಅಂಗವೈಕಲ್ಯತೆ ಹೊಂದಿದವರಿಗೆ ಶಾಶ್ವತ ಪರಿಹಾರ ನೀಡಬೇಕು ಮತ್ತು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯ ಅರಣ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಅವರು ಒತ್ತಾಯಿಸಿದರು.
ಹುಲಿ ದಾಳಿಗೆ ಬಲಿಯಾದ ಬಾಲಕ ಹಾಗೂ ವೃದ್ಧೆಯ ಕುಟುಂಬಕ್ಕೆ 7.50 ಲಕ್ಷ ರೂ. ಪರಿಹಾರ ನೀಡುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಇಲ್ಲದೆ ಪರಿಹಾರ ಸಿಗುವುದು ಕಷ್ಟ ಸಾಧ್ಯವಾಗಿದೆ. ಅಸಹಾಯಕರಿಗೆ ಅಗತ್ಯ ದಾಖಲೆಗಳನ್ನು ಒದಗಿಸಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ದಾಖಲೆ ಇಲ್ಲದವರನ್ನು ಪತ್ತೆ ಹಚ್ಚುವ ಕಾಳಜಿಯನ್ನು ಅಧಿಕಾರಿಗಳು ತೋರಬೇಕಿದೆ. ಆದರೆ ಇದ್ಯಾವುದನ್ನೂ ಸರ್ಕಾರ ಮಾಡುತ್ತಿಲ್ಲ, ವನ್ಯಜೀವಿಗಳನ್ನೂ ನಿಯಂತ್ರಿಸುತ್ತಿಲ್ಲ. ಏನೂ ಮಾಡಲಾಗದವರು ಸರ್ಕಾರ ಯಾಕೆ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಇಬ್ಬರು ಮೃತರ ಕುಟುಂಬಗಳಿಗೆ ದಾಖಲೆ ಇಲ್ಲ ಎನ್ನುವ ಕಾರಣಕ್ಕೆ ಪರಿಹಾರ ನೀಡದೆ ಸತಾಯಿಸಬಾರದೆಂದು ತಾವು ಮಾಡಿಕೊಂಡ ಮನವಿಗೆ ಅರಣ್ಯ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿ ಪರಿಹಾರ ವಿತರಿಸುವ ಭರವಸೆ ನೀಡಿದ್ದಾರೆ ಎಂದು ವೀಣಾಅಚ್ಚಯ್ಯ ಹೇಳಿದರು.
::: 7 ಹುಲಿಗಳಿವೆ :::
ಒಂದು ಹುಲಿಯನ್ನು ಸೆರೆ ಹಿಡಿಯಾಗಿದೆಯಾದರೂ ಸೋಮವಾರ ಮತ್ತೆ ದಾಳಿ ಮಾಡಿರುವ ಬೇರೊಂದು ಹುಲಿ ಎರಡು ಹಸುಗಳನ್ನು ಕೊಂದು ಹಾಕಿದೆ. ಅಲ್ಲದೆ ಹುಲಿಯನ್ನು ಕಂಡು ಬಾಲಕಿಯೊಬ್ಬಳು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಈ ಭಾಗದಲ್ಲಿ ಸುಮಾರು ಏಳು ಹುಲಿಗಳು ಸಂಚರಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ವೀಣಾಅಚ್ಚಯ್ಯ, ಹೊರ ಜಿಲ್ಲೆಗಳಲ್ಲಿ ಸೆರೆ ಹಿಡಿದ ಹುಲಿಗಳನ್ನು ಕೊಡಗಿಗೆ ತಂದು ಬಿಡುತ್ತಿರುವ ಬಗ್ಗೆ ಶಂಕೆ ಇದೆ. ಮಂಗಗಳನ್ನು ಕೂಡ ತಂದು ಬಿಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗಿನ ಜನರ ತಾಳ್ಮೆಗೂ ಒಂದು ಮಿತಿ ಇದೆ, ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ರಾಜಕೀಯ ರಹಿತವಾಗಿ ಒಗ್ಗೂಡಿ ವಿಧಾನಸೌಧ ಚಲೋ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವನ್ಯಜೀವಿ ದಾಳಿ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದರು. ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸಿದ ಅವರು ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದಾಗ 50 ಪೈಸೆ ಹೆಚ್ಚಾದರೂ ಬೀದಸಿಗಳಿಯುತ್ತಿದ್ದ ಬಿಜೆಪಿ ಕಾರ್ಯಕರ್ತರು ಈಗ ಯಾಕೆ ಬಾಯಿ ಮುಚ್ಚಿಕೊಂಡು ಕುಳಿತ್ತಿದ್ದಾರೆ, ಬೆಲೆ ಏರಿಕೆಯ ಬಿಸಿ ಈಗ ಇವರಿಗೆ ತಟ್ಟುತ್ತಿಲ್ಲವೇ ಎಂದು ಪ್ರಶ್ನಿಸಿದರು.

::: ಮಧ್ಯರಾತ್ರಿ ಹುಲಿ ಬಿಡುತ್ತಿದ್ದಾರೆ :::
ಜಿಲ್ಲಾ ಕಾಂಗ್ರೆಸ್ ಪ್ರಮುಖ ಧರ್ಮಜ ಉತ್ತಪ್ಪ ಮಾತನಾಡಿ ಬೇರೆ ಜಿಲ್ಲೆಗಳಲ್ಲಿ ಸೆರೆಯಾದ ನರಭಕ್ಷಕ ಹುಲಿಗಳನ್ನು ಮಧ್ಯರಾತ್ರಿ ತಂದು ದಕ್ಷಿಣ ಕೊಡಗು ಭಾಗದಲ್ಲಿ ಬಿಡುತ್ತಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಹುಲಿದಾಳಿಯ ಪ್ರಕರಣಗಳನ್ನೇ ನೋಡದ ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿದಾಳಿ ಮಿತಿಮೀರುತ್ತಿರುವುದಕ್ಕೆ ಇದೇ ಕಾರಣವೆಂದು ಆರೋಪಿಸಿದರು.
ನಾಗರಹೊಳೆ, ಬ್ರಹ್ಮಗಿರಿ, ಪುಷ್ಪಗಿರಿ ಮತ್ತಿತರ ಅರಣ್ಯ ಭಾಗಗಳನ್ನು ವನ್ಯಜೀವಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿದ್ದು, ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹುಲಿ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇಡೀ ಕೊಡಗು ಅರಣ್ಯ ಪ್ರದೇಶವೆಂದು ಭಾವಿಸಿ ಹುಲಿಗಳನ್ನು ಬೀಡಲಾಗುತ್ತಿದೆ. ದಕ್ಷಿಣ ಕೊಡಗಿನ ಅನೇಕ ಕಡೆ ಹುಲಿಗಳು ಸಂಚರಿಸುತ್ತಿರುವುದರಿಂದ ಜನ ಆತಂಕದಲ್ಲಿ ಮುಳುಗಿದ್ದು, ಅಘೋಷಿತ ಬಂದ್ ನ ವಾತಾವರಣವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ಕೇಂದ್ರ ಹಾಗೂ ರಾಜ್ಯ ಸರ್ಕಾರ ವನ್ಯಜೀವಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಘೋಷಿಸಬೇಕೆಂದು ಧರ್ಮಜ ಉತ್ತಪ್ಪ ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟುಮೊಣ್ಣಪ್ಪ ಮಾತನಾಡಿ ನಿಟ್ಟೂರು, ನಾಲ್ಕೇರಿ, ಬಿರುನಾಣಿ, ಸಿದ್ದಾಪುರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುಮಾರು 18 ರಿಂದ 20 ಹುಲಿಗಳು ಸಂಚರಿಸುತ್ತಿದ್ದು, ಕೊಡಗನ್ನು ಹುಲಿಧಾಮ ಮಾಡಲು ಹೊರಟಂತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹುಲಿಗಳ ದಾಳಿಯಿಂದ ಆಗುತ್ತಿರುವ ಅನಾಹುತಗಳಿಗೆ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದರು ಹಾಗೂ ಶಾಸಕರುಗಳೇ ನೇರ ಹೊಣೆ ಎಂದು ಆರೋಪಿಸಿದರು.
ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವಿದ್ದಾಗ ಅಂದಿನ ಅರಣ್ಯ ಸಚಿವ ರಮಾನಾಥ ರೈ ಅವರು ಕಾಡಾನೆಗಳ ದಾಳಿ ತಡೆಗೆ ರೈಲು ಕಂಬಿಗಳ ಬೇಲಿಯನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿ ಶೇ.80ರಷ್ಟು ಕಾಮಗಾರಿ ಪೂರ್ಣಗೊಳಿಸಿದ್ದರು. ಆದರೆ ನಂತರ ಬಂದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಉಳಿದಿರುವ ಕಾಮಗಾರಿಯನ್ನು ಇನ್ನೂ ಕೂಡ ಪೂರ್ಣಗೊಳಿಸಲು ಸಾದ್ಯವಾಗಿಲ್ಲವೆಂದು ಟೀಕಿಸಿದರು.
ರೈಲುಕಂಬಿಯ ಬೇಲಿ ನಿರ್ಮಾಣದಿಂದ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಬಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪೊನ್ನಂಪೇಟೆ ತಾಲ್ಲೂಕು ಅಧ್ಯಕ್ಷ ಮಿದೇರಿರ ನವೀನ್ ಹಾಗೂ ವಿಧಾನ ಪರಿಷತ್ ಸದಸ್ಯರ ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಉಪಸ್ಥಿತರಿದ್ದರು.

error: Content is protected !!