ಮಧ್ಯರಾತ್ರಿ ಕೊಡಗಿಗೆ ಹುಲಿ ತಂದು ಬಿಡುತ್ತಿದ್ದಾರೆ !

ಮಡಿಕೇರಿ ಫೆ.23 : ಬೇರೆ ಜಿಲ್ಲೆಗಳಲ್ಲಿ ಸೆರೆಯಾದ ನರಭಕ್ಷಕ ಹುಲಿಗಳನ್ನು ಮಧ್ಯರಾತ್ರಿ ತಂದು ದಕ್ಷಿಣ ಕೊಡಗು ಭಾಗದಲ್ಲಿ ಬಿಡುತ್ತಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಹುಲಿದಾಳಿಯ ಪ್ರಕರಣಗಳನ್ನೇ ನೋಡದ ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿದಾಳಿ ಮಿತಿಮೀರುತ್ತಿರುವುದಕ್ಕೆ ಇದೇ ಕಾರಣವೆಂದು ಜಿಲ್ಲಾ ಕಾಂಗ್ರೆಸ್ ಪ್ರಮುಖ ಧರ್ಮಜ ಉತ್ತಪ್ಪ ಮಡಿಕೇರಿಯಲ್ಲಿ ಆರೋಪಿಸಿದರು.
ನಾಗರಹೊಳೆ, ಬ್ರಹ್ಮಗಿರಿ, ಪುಷ್ಪಗಿರಿ ಮತ್ತಿತರ ಅರಣ್ಯ ಭಾಗಗಳನ್ನು ವನ್ಯಜೀವಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿದ್ದು, ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹುಲಿ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇಡೀ ಕೊಡಗು ಅರಣ್ಯ ಪ್ರದೇಶವೆಂದು ಭಾವಿಸಿ ಹುಲಿಗಳನ್ನು ಬೀಡಲಾಗುತ್ತಿದೆ. ದಕ್ಷಿಣ ಕೊಡಗಿನ ಅನೇಕ ಕಡೆ ಹುಲಿಗಳು ಸಂಚರಿಸುತ್ತಿರುವುದರಿಂದ ಜನ ಆತಂಕದಲ್ಲಿ ಮುಳುಗಿದ್ದು, ಅಘೋಷಿತ ಬಂದ್ ನ ವಾತಾವರಣವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ಕೇಂದ್ರ ಹಾಗೂ ರಾಜ್ಯ ಸರ್ಕಾರ ವನ್ಯಜೀವಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಘೋಷಿಸಬೇಕೆಂದು ಧರ್ಮಜ ಉತ್ತಪ್ಪ ಒತ್ತಾಯಿಸಿದರು.