‘ನಮ್ಮ ಜನ-ನಮ್ಮ ಸಂಸ್ಕೃತಿ’ ಗಿರಿಜನೋತ್ಸವ : ನೈತಿಕ ಬದುಕು ಇರುವುದು ಹಾಡಿಗಳಲ್ಲಿ : ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯ

February 23, 2021

ಮಡಿಕೇರಿ ಫೆ.23 : ನೈತಿಕ ಬದುಕು ಅಥವಾ ಸಂಸ್ಕೃತಿ ಅನಾವರಣ ಇದೆ ಎಂದಾದರೆ ಅದು ಹಾಡಿಯ ಜನರ ಬದುಕಿನಲ್ಲಿ ಹೊರತು ಪಟ್ಟಣದ ವಿಲಾಸಿ ಜೀವನದಲ್ಲಿ ಅಲ್ಲ, ಹಾಡಿಯ ಜನರ ಜೀವನಕ್ಕೆ ನಾವು ಸಾತ್ ನೀಡಬೇಕು ಎಂದು ಶಾಸಕರು ಹಾಗೂ ಕರ್ನಾಟಕ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಹೇಳಿದರು.
ಕೊಡಗು ವನವಾಸಿ ಕಲ್ಯಾಣ ಕೇಂದ್ರ, ಮೈಸೂರು ರಂಗಾಯಣ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಿಟ್ಟೂರು ಗ್ರಾ.ಪಂ.ಗೆ ಸೇರಿದ ಕಾರ್ಮಾಡು ಗ್ರಾಮದಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ ‘ನಮ್ಮ ಜನ-ನಮ್ಮ ಸಂಸ್ಕೃತಿ’ ಗಿರಿಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವಿಶೇಷ ಯೋಜನೆ ಗಿರಿಜನರ ಬದುಕಿಗೆ ನವ ಚೈತನ್ಯ ತುಂಬುವ ಕೆಲಸ ಮಾಡುತ್ತಿದೆ. ಅದು ಹಾಡಿಯ ಜನರಿಗೆ ತಲುಪಿದಾಗ ಅದರ ಫಲ ದೊರೆಯುವುದು. ಆ ನಿಟ್ಟಿನಲ್ಲಿ ಐಟಿಡಿಪಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಹಾಡಿಯ ಜನರ ಬದುಕನ್ನು ಸಾರ್ವಜನಿಕರ ಮುಂದೆ ಪ್ರಸ್ತುತ ಪಡಿಸಬೇಕಾದ ಜವಾಬ್ದಾರಿ ಹಾಗೂ ಅದನ್ನು ಕಾರ್ಯ ರೂಪಕ್ಕೆ ತರುವ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ಮಾಡಿ, ಹಾಡಿಯ ಜನರಿಗೆ ಮೂಲಭೂತ ಸೌಲಭ್ಯಗಳು ದೊರೆಯುವಂತಾಗಬೇಕು. ಹಾಡಿಯ ಪ್ರತಿಭೆಗಳಿಗೆ ತಕ್ಕ ಅವಕಾಶ ಈ ವೇದಿಕೆ ನೀಡುತ್ತಿರುವುದು ಈ ಕಾರ್ಯ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.
ಸ್ವಾಭಿಮಾನಿ ಮತ್ತು ಸ್ವಾವಲಂಬಿ ಜೀವನ ಗಿರಿಜನರ ಮೂಲ ಗುರುತಾಗಿದೆ. ಸ್ವಾವಲಂಬಿ ಮತ್ತು ಸ್ವಾಭಿಮಾನ ಜೀವನ ಪ್ರಧಾನ ಮಂತ್ರಿಯವರ ಕನಸಾಗಿದೆ. ಅದನ್ನು ಗಿರಿಜನರ ಮೂಲಕ ನನಸು ಮಾಡಬೇಕು. ಅದಕ್ಕೆ ಬೇಕಾದ ರೀತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ತಂದ ಅರಣ್ಯ ಕಾಯ್ದೆ ಹಕ್ಕು ಬುಡಕಟ್ಟು ಜನಾಂಗದ ಉಳಿವಿಗಾಗಿ ಮಾಡಿದ ಕಾಯ್ದೆ ಆಗಿದೆ.
ಜೊತೆಗೆ ಸೈದ್ಧಾಂತಿಕ ದುಷ್ಟ ಶಕ್ತಿಯ ಪರಿಣಾಮ ಹಾಡಿಯ ಸಂಸ್ಕøತಿಯ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ಹಾಡಿಯ ಜನ ಆಚಾರ ವಿಚಾರಕ್ಕೆ ಪ್ರಾಮಾಣಿಕ ಗೌರವ ನೀಡುವುದು ಒಳಿತು. ಕೊಡಗಿನ ಕುಲದೇವತೆ ಕಾವೇರಿ ತಾಯಿಯ ಆಶೀರ್ವಾದ ಅವರ ಮೇಲಿದೆ ಎಂದು ತಿಳಿಸಿದರು.
ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ.ಕಾರ್ಯಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಂಗಾಯಣದ ಹುಟ್ಟು ಬೆಳವಣಿಗೆಯ ಬಗ್ಗೆ ತಿಳಿಸುತ್ತಾ ಸಂಸ್ಕøತಿಯ ಉಳಿಸುವಿಕೆಯಲ್ಲಿ ರಂಗಾಯಣದ ಪಾತ್ರ ಪ್ರಮುಖವಾದದ್ದು ಎಂದು ಅಭಿಪ್ರಾಯ ಪಟ್ಟರು.
ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಸಂಸ್ಕøತಿ ಹೊಂದಿರುವ ದೇಶವಾಗಿದೆ. ಅದು ಕೇವಲ ಮಾತಾಗಿರಬಾರದು. ಆದ್ದರಿಂದಲೇ ನಮ್ಮ ಜನ ನಮ್ಮ ಸಂಸ್ಕೃತಿ ಎಂಬ ಧ್ಯೇಯ ವಾಕ್ಯದೊಂದಿಗೆ ‘ವನಸಿರಿಯ ನಡಿಗೆ ಹಾಡಿಯ ಕಡೆಗೆ’ ಎಂಬ ಘೋಷಣೆಯ ಮೂಲಕ ಸಂಸ್ಕøತಿ ಹಾಗೂ ಗಿರಿಜನರ ಬದುಕಿಗೆ ಅಗತ್ಯವಾದ ಮೂಲಭೂತ ಅಂಶಗಳು ನೀಡುವುದಾಗಿದೆ. ನಾವು ನಡೆಸುವ ಪ್ರತಿಯೊಂದು ಕಾರ್ಯವೂ ಕಾವೇರಿ ತಾಯಿಗೆ ಅರ್ಪಿತಾ ಎಂದು ನುಡಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಜಡೇಗೌಡ ಅವರು ಮಾತನಾಡಿ ಕರ್ನಾಟಕದಲ್ಲಿ ಮೂಲ 12 ವನವಾಸಿಯರಿದ್ದಾರೆ. ಅವರಿಂದ ಕಾಡು ರಕ್ಷಣೆ ಸಾಧ್ಯ. ಏಕೆಂದರೆ ಅವರದು ಸರಳ ಜೀವನ, ಪ್ರಕೃತಿಯೊಂದಿಗಿನ ಸಾಮರಸ್ಯ ಜೀವನ ಅವರದು ಹಾಗೂ ಪ್ರಕೃತಿಯ ಆರಾಧಕರು ಅವರಾಗಿದ್ದಾರೆ ಎಂದು ಹೇಳಿದರು.
ಹಾಡಿಯ ಜನರು ಹೆಚ್ಚಿನ ವಿದ್ಯಾಭ್ಯಾಸ ಪಡೆಯಬೇಕು ಏಕೆಂದರೆ ಶಿಕ್ಷಣ ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸುವ ಮೂಲವಾಗಿದೆ. ನಮ್ಮ ಸಂಸ್ಕೃತಿಯ ಬಗ್ಗೆ ನಮಗೆ ಹೆಮ್ಮೆ ಇರಬೇಕು ಅದನ್ನು ಹೊರತು ಪಡಿಸಿ ಬೇರೆ ಧರ್ಮಗಳಿಗೆ ಮತಾಂತರ ಹೊಂದುವುದು ನಮ್ಮ ಸಂಸ್ಕೃತಿಯ ಕಗ್ಗೊಲೆ ನಾವೇ ಮಾಡಿದಂತೆ. ವಿದ್ಯಾವಂತ ಹಾಡಿಯ ನಾಗರಿಕರು ನಮ್ಮ ಬುಡಕಟ್ಟು ಸಂಸ್ಕೃತಿ ಬಗ್ಗೆ ಹಾಡು, ಪದ್ಯ, ಪುಸ್ತಕಗಳನ್ನು ರಚಿಸುವ ಮೂಲಕ ಉಳಿವಿಗೆ ಬುನಾದಿ ಅಳಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿ ಅವರು ಮಾತನಾಡಿ ಗಿರಿಜನರ ಮೂಲಭೂತ ಸಮಸ್ಯೆಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ಭಾಷೆ, ಕಲೆ, ಸಂಸ್ಕøತಿ, ಉಡುಗೆ, ಆಹರ ಪದ್ದತಿಗಳೆ ಗಿರಿಜನರ ಮೂಲ ಸಂಸ್ಕøತಿಯಾಗಿದ್ದು, ಸಂಸ್ಕøತಿಯನ್ನು ಕಳೆದುಕೊಂಡರೆ ನಮ್ಮನ್ನು ನಾವು ಕಳೆದುಕೊಂಡಂತೆ ಎಂದು ಅವರು ಹೇಳಿದರು.
ಗಿರಿಜನೋತ್ಸವ ಕಾರ್ಯಕ್ರಮದಲ್ಲಿ ಕಲೆಯಲ್ಲಿ ವಿಶೇಷ ಸಾಧನೆಗೈದ ಮರಿ ದಾಸಿ (ಕುರುಬ ಜನಪದ ಕಲೆ), ಪಂಜರಿ ಯರವರ ಚಾತ (ಯರವ ಸಂಸ್ಕ್ರತಿ), ಸೋಲಿಗರ ನಾಗಮ್ಮ (ನಾಟಿ ಔಷಧಿ), ಬೆಟ್ಟ ಕುರುಬ ಕಾಳ (ಗಿರಿಜನ ಹೋರಾಟಗಾರ), ಯರವರ ಚಿಣ್ಣಿ (ಆರಾಧನೆ) ಸಾಧಕರಿಗೆ ಸನ್ಮಾನಿಸಲಾಯಿತು.
ಯರವರ ಚೀನಿದುಡಿ-ಯರವರ ಪಿ.ಕಾಳ ತಂಡ ಮಾಯಮುಡಿ, ಜೇನುಕುರುಬರ ಕೋಲಟ-ಜೆ.ಕೆ.ರಾಮು ತಂಡ ಕುಶಾಲನಗರ, ಉರ್‍ಟಿಕೊಟ್ಟ್ ಆಟ್-ಗೋಪಮ್ಮ ಮಹಿಳ ತಂಡ ತೋಮರ, ಸೋದೋದಿಮ್ಮಿ ಕುಣಿತ-ರಮೇಶ್ ತೋಡ ನಾಣಚ್ಚಿ ನಾಗರಹೊಳೆ, ದೇವರ ಕರಿಯಾಟ-ಬೆಟ್ಟಕುರುಬರ ಸುಮಾ ತಂಡ, ಮತ್ತೂರು, ಯರವದೇವರ ಕುಣಿತ-ಯರವರ ಪ್ರಕಾಶ್ ತಂಡ, ಬ್ರಹ್ಮಗಿರಿ ಇವು ಕಾರ್ಯಕ್ರಮದಲ್ಲಿ ಭಾಗವಹಿಸುವ ಜಿಲ್ಲೆಯ ಕಲಾ ತಂಡಗಳಾಗಿವೆ.
ಕೊರಗರ ಡೋಲು-ಬಾಬು ಪಾಂಗಳ ತಂಡ, ದಕ್ಷಿಣಕನ್ನಡ ಜಿಲ್ಲೆ, ಪೂಜಾ ಕುಣಿತ-ಮಾದೇಶ ಪೂಜ ಕುಣಿತ ತಂಡ ರಾಮನಗರ ಜಿಲ್ಲೆ, ಸಿದ್ದಿ ಡಮಾಮಿ ನೃತ್ಯ- ಅಮ್ಮಚ್ಚೆ ಮೌಳಿ ಸಿದ್ದಿ ಕಲಾತಂಡ, ಉತ್ತರಕನ್ನಡ ಜಿಲ್ಲೆ, ಗೊರುಕನ ನೃತ್ಯ- ಸೋಲಿಗ ಕಲಾಸಂಘ ಚಾಮರಾಜನಗರ ಜಿಲ್ಲೆ, ಕಂಸಾಳೆ ನೃತ್ಯ- ಕುಮಾರ್ ನಾಯಕ್ ತಂಡ ಪಿರಿಯಾಪಟ್ಟಣ ಜಿಲ್ಲೆ, ಕೀಲು ಕುದುರೆ- ಮಂಜುನಾಥ ತಂಡ ತುಮಕೂರು, ಡೊಳ್ಳು ಕುಣಿತ-ನಾಗನಾಯಕ ತಂಡ ಮೈಸೂರು, ಕರಡಿ ಕುಣಿತ- ರಮೇಶ ತಂಡ ಹೆಚ್.ಡಿ.ಕೋಟೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಹೊರ ಜಿಲ್ಲೆಯ ಕಲಾ ತಂಡಗಳು ಭಾಗವಹಿಸಿದ್ದವು.
ದಕ್ಷಿಣ ಭಾರತ ವನವಾಸಿ ಹಿತರಕ್ಷಣಾ ಪ್ರಮುಖರಾದ ಕೃಷ್ಣಮೂರ್ತಿ, ವಿರಾಜಪೇಟೆ ತಾ.ಪಂ. ಅಧ್ಯಕ್ಷರಾದ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷರಾದ ನೆಲ್ಲಿರ ಚಲನ್‍ಕುಮಾರ್, ನಿಟ್ಟೂರು ಗ್ರಾ.ಪಂ.ಅಧ್ಯಕ್ಷರಾದ ಚೆಕ್ಕೇರ ಅಯ್ಯಪ್ಪ ಸೂರ್ಯ, ವನವಾಸಿ ಕಲ್ಯಾಣ ಕೇಂದ್ರ ಅಧ್ಯಕ್ಷರಾದ ಯರವರ ಪ್ರಕಾಶ್, ಪ್ರಾಂತ ಪ್ರಮುಖರಾದ ಚೆಕ್ಕೇರ ಮನು ಕಾವೇರಪ್ಪ, ರಂಗಾಯಣ ಜಂಟಿ ನಿರ್ದೇಶಕರಾದ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಇತರರು ಪಾಲ್ಗೊಂಡಿದ್ದರು.

error: Content is protected !!