ದಕ್ಷಿಣ ಕೊಡಗಿನಲ್ಲಿ ಹುಲಿ ಹಾವಳಿ ಹೆಚ್ಚಾಗಲು ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ : ಜಿ.ಪಂ ಸದಸ್ಯ ಬಿ.ಎನ್. ಪ್ರತ್ಯು ಆರೋಪ

ಪೊನ್ನಂಪೇಟೆ, ಫೆ.24: ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಕೊಡಗಿನ ಹಲವು ಗ್ರಾಮಗಳಲ್ಲಿ ಹುಲಿ ಹಾವಳಿ ತೀವ್ರವಾಗಿದ್ದರೂ ಜನರ ಬೇಡಿಕೆಗಳಿಗೆ ಸ್ಪಂದಿಸದ ಅರಣ್ಯ ಇಲಾಖೆಯ ಅಧಿಕಾರಿಗಳು ವಿವಿಧ ಕಾನೂನುಗಳ ನೆಪವೊಡ್ಡಿ ನಿರ್ಲಕ್ಷ್ಯ ವಹಿಸುತ್ತಾ ಬಂದಿದ್ದಾರೆ. ಇವರ ನಿರ್ಲಕ್ಷವೇ ಈ ಭಾಗದಲ್ಲಿ ಹುಲಿಗಳ ಹಾವಳಿ ಹೆಚ್ಚಾಗಲು ಪ್ರಮುಖ ಕಾರಣ ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಜಿ. ಪಂ. ಸದಸ್ಯರಾದ ಬಿ.ಎನ್. ಪ್ರತ್ಯು ಅವರು, ಇದೀಗ ಕಳೆದ 3 ದಿನಗಳ ಹಿಂದೆ ಶ್ರೀಮಂಗಲ ವ್ಯಾಪ್ತಿಯಲ್ಲಿ ಸಂಭವಿಸಿದ ಅಮೂಲ್ಯವಾದ 2 ಜೀವಹಾನಿಗೆ ಅರಣ್ಯ ಇಲಾಖೆಯೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಅರಣ್ಯ ಅಧಿಕಾರಿಗಳಿಗೆ ಇಂದು ಮನುಷ್ಯನ ಜೀವಕ್ಕಿಂತ ಪ್ರಾಣಿಗಳ ಜೀವವೇ ಮುಖ್ಯವೆನಿಸಿದಂತಿದೆ. ಮನುಷ್ಯನ ಬದುಕನ್ನು ನಾಶಗೊಳಿಸಿ ಪ್ರಾಣಿ ಸಂರಕ್ಷಣೆಗೆ ಮುಂದಾಗುತ್ತಿರುವ ಅರಣ್ಯಾಧಿಕಾರಿಗಳು ಮನುಷ್ಯ ವಿರೋಧಿಗಳಾಗಿ ವರ್ತಿಸುತ್ತಿದ್ದಾರೆ. ಕೆಲ ಅರಣ್ಯ ಅಧಿಕಾರಿಗಳಿಗೆ ಮಾನವೀಯತೆಯೇ ಇಲ್ಲದಂತಾಗಿದೆ. ಮನುಷ್ಯನ ಸಮಾಧಿ ಮೇಲೆ ಪ್ರಾಣಿ ಸಂರಕ್ಷಣೆ ಯಾವ ಪುರುಷಾರ್ಥಕ್ಕಾಗಿ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಇತ್ತೀಚೆಗಂತೂ ದ. ಕೊಡಗಿನ ಹಲವೆಡೆ ಕಾಡಾನೆ, ಕರಡಿ ಸೇರಿದಂತೆ ಹುಲಿಗಳ ಹಾವಳಿ ತೀವ್ರವಾಗಿದೆ. ಇದರಿಂದ ರೈತರು ದೊಡ್ಡ ಮಟ್ಟದಲ್ಲಿ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಹೆಚ್ಚುತ್ತಿರುವ ಹುಲಿ ಹಾವಳಿ ಬಗ್ಗೆ ಜಿ. ಪಂ. ಸಭೆಗಳಲ್ಲಿ, ಗ್ರಾಮ ಸಭೆಗಳಲ್ಲಿ ವಿಷಯ ಪ್ರಸ್ತಾಪಿಸಿ ಹುಲಿ ಹಾವಳಿ ನಿಯಂತ್ರಣಕ್ಕಾಗಿ ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ಎಷ್ಟೇ ಒತ್ತಾಯಿಸಿದರೂ ಅರಣ್ಯ ಇಲಾಖೆ ಮಾತ್ರ ಈ ಬೇಡಿಕೆಯನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಶ್ರೀಮಂಗಲ ಭಾಗದಲ್ಲಿ ಹುಲಿ ಹಾವಳಿ ನಿಯಂತ್ರಣಕ್ಕೆ ಅಗತ್ಯ ಮುಂಜಾಗೃತಾ ಕ್ರಮ ಕೈಗೊಂಡಿದ್ದರೆ 2 ಜೀವಹಾನಿ ಸಂಭವಿಸುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿರುವ ಬಿ.ಎನ್. ಪ್ರತ್ಯು ಅವರು, ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಸೋಮವಾರದಂದು ವಿದ್ಯಾರ್ಥಿನಿಯೊಬ್ಬಳು ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದಲ್ಲಿ ಹುಲಿಯನ್ನು ಕಂಡು ಭಯಬೀತಳಾಗಿ ಮೂರ್ಛೆ ಹೋದ ಪ್ರಕರಣವೂ ನಡೆದಿದೆ. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ಅರಣ್ಯ ಇಲಾಖೆ ಮಾತ್ರ ಕಾನೂನಿನ ನೆಪ ಹೇಳಿಕೊಂಡು ಕೈಕಟ್ಟಿ ಕುಳಿತಿದೆ. ಹುಲಿಯನ್ನು ಕಂಡ ಮಾಹಿತಿಯನ್ನು ಜನರೇ ಇಲಾಖೆಗೆ ತಿಳಿಸಿದರೆ ಆಗ ಮಾತ್ರ ಸ್ಥಳಕ್ಕೆ ಬಂದು ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯ ನಾಟಕವಾಡಿ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದಷ್ಟೇ ಇವರ ಕೆಲಸ ಎಂದು ಅವರು ದೂರಿದರು.
ಕುಟ್ಟ ಸಮೀಪದ ಮಂಚಳ್ಳಿಯಲ್ಲಿ ಸೆರೆಸಿಕ್ಕಿರುವ ಹುಲಿಯ ಬಗ್ಗೆ ಜನತೆಗೆ ಸಾಕಷ್ಟು ಗೊಂದಲಗಳಿವೆ. ನರಭಕ್ಷಕ ಹುಲಿ ಇನ್ನೂ ಈ ಭಾಗದಲ್ಲಿ ಸಂಚರಿಸುತ್ತಿದೆ ಎಂಬುದು ಸ್ಥಳಿಯ ಜನವಲಯದ ಮಾತಾಗಿದೆ. ಅಲ್ಲದೆ ನರಭಕ್ಷಕ ಹುಲಿಗಳನ್ನು ಬೇರೆಡೆಯಿಂದ ತಂದು ದ. ಕೊಡಗಿನ ಅರಣ್ಯದಂಚಿನಲ್ಲಿ ಬಿಡುತ್ತಿದ್ದಾರೆ ಎಂಬ ಗುಮಾನಿಯೂ ಇದೆ. ಸಹಜವಾಗಿ ಬರುವ ಈ ಎಲ್ಲಾ ಸಂಶಯಗಳಿಗೆ ಅರಣ್ಯ ಇಲಾಖೆಯ ವರ್ತನೆಯೇ ಕಾರಣವಾಗುತ್ತಿದೆ ಎಂದು ಆರೋಪಿಸಿರುವ ಪ್ರತ್ಯು, ಇದುವರೆಗೂ ಅದೆಷ್ಟೋ ಜಾನುವಾರುಗಳನ್ನು ಹುಲಿಗಳು ದಾಳಿ ನಡೆಸಿ ಬಲಿ ಪಡೆದುಕೊಂಡಿದೆ. ಈ ವೇಳೆ ಎಷ್ಟೇ ಸಾಹಸಪಟ್ಟರೂ ಎಲ್ಲಾ ಹುಲಿಗಳನ್ನು ಹಿಡಿಯಲು ಅರಣ್ಯ ಇಲಾಖೆಗೆ ಇದುವರೆಗೂ ಸಾಧ್ಯವಾಗಿಲ್ಲ. 2 ಜೀವ ಹಾನಿ ಸಂಭವಿಸಿದ ಪರಿಣಾಮ ಸಾರ್ವಜನಿಕರು ರೊಚ್ಚಿಗೇಳುವ ಸಾಧ್ಯತೆ ಇರುವಾಗ ದಿಡೀರ್ ಆಗಿ ಹುಲಿಯೊಂದನ್ನು ಅರಣ್ಯ ಇಲಾಖೆ ಹೇಗೆ ಸೆರೆಹಿಡಿಯಿತು?. ಈ ಇಚ್ಛಾಶಕ್ತಿ ಮೊದಲೇ ಏಕೆ ಇರಲಿಲ್ಲ? ಎಂದು ಅವರು ಪ್ರಶ್ನಿಸಿದರು.
ಅರಣ್ಯದಂಚಿನಲ್ಲಿ ಹುಲಿಗಳ ಹಾವಳಿ ಹೆಚ್ಚಾತ್ತಿರುವುದರ ಹಿಂದೆ ಬಹುದೊಡ್ಡ ಮಟ್ಟದ ಹುನ್ನಾರವಿದೆ ಎಂದು ಗಂಭೀರವಾಗಿ ಆರೋಪ ಮಾಡಿರುವ ಬಿ.ಎನ್. ಪ್ರತ್ಯು ಅವರು, ರೈತ ವಿರೋಧಿ ಧೋರಣೆಯೇ ಇದರ ಹಿಂದಿರುವ ಪ್ರಮುಖ ಅಜೆಂಡಾವಾಗಿದೆ. ಹೀಗೆ ಮುಂದುವರಿದರೆ ಅರಣ್ಯದಂಚಿನ ಕಾಫಿ ತೋಟಗಳು ಪಾಳು ಬಿದ್ದು ಬೆಳೆಗಾರರು ಪಾಲಾಯನ ಮಾಡಬೇಕಾಗುತ್ತದೆ. ಈ ಪಿತೂರಿಯ ಮೂಲ ಉದ್ದೇಶವೂ ಇದೇ ಆಗಿದೆ ಎಂದು ಅವರು ವಿವರಿಸಿದ್ದಾರೆ.
ಮನುಷ್ಯನ ಜೀವಕ್ಕೆ ಬೆಲೆ ಕಲ್ಪಿಸುವುದು ಅಸಾಧ್ಯ. ಹುಲಿ ದಾಳಿಯಿಂದಾಗಿ ಸಾವನ್ನಪ್ಪಿರುವ ಇಬ್ಬರು ವ್ಯಕ್ತಿಗಳ ಕುಟುಂಬಕ್ಕೆ ಕನಿಷ್ಠ ರೂ.25 ಲಕ್ಷ ಮೊತ್ತದ ಪರಿಹಾರವಾದರೂ ಅರಣ್ಯ ಇಲಾಖೆ ನೀಡಬೇಕು. ಹುಲಿ ದಾಳಿಯಿಂದಾಗಿ ಜಾನುವಾರುಗಳು ಬಲಿಯಾದರೆ ಅವುಗಳಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು ಕೂಡಲೇ ಹೆಚ್ಚಿಸಬೇಕು. ದ. ಕೊಡಗಿನಲ್ಲಿ ಹುಲಿ ಹಾವಳಿಯನ್ನು ತಡೆಗಟ್ಟಲು ವೈಜ್ಞಾನಿಕವಾಗಿ ವಿಶೇಷ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿರುವ ಬಿ.ಎನ್. ಪ್ರತ್ಯು ಅವರು, ಇಲ್ಲದಿದ್ದರೆ ಮಾರ್ಚ್ ತಿಂಗಳ ನಂತರ ಜನರನ್ನು ಸಂಘಟಿಸಿ ಪೊನ್ನಂಪೇಟೆ ತಾಲೂಕಿನ ಎಲ್ಲಾ ಅರಣ್ಯ ಕಚೇರಿಗಳಿಗೆ ಬೀಗ ಜಡಿದು ತೀವ್ರ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
