ಫೆ.27, 28ರಂದು ಮಡಿಕೇರಿಯಲ್ಲಿ ಗೌಳಿ ಸಮುದಾಯದ ಕ್ರೀಡೋತ್ಸವ : ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನ

February 24, 2021

ಮಡಿಕೇರಿ ಫೆ.24 : ನಗರದ ಗೌಳಿಬೀದಿಯ ಶ್ರೀಕಂಚಿ ಕಾಮಾಕ್ಷಿಯಮ್ಮ ದೇವಾಲಯ ಸಮಿತಿ ವತಿಯಿಂದ ಇದೇ ಮೊದಲ ಬಾರಿಗೆ ಗೌಳಿ ಸಮುದಾಯದ ಕ್ರೀಡಾಕೂಟ ಫೆ.27 ಮತ್ತು 28 ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಹಾಗೂ ಗೌಳಿಬೀದಿಯ ಮೈದಾನದಲ್ಲಿ ನಡೆಯಲಿದೆ.
ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಸಮುದಾಯದ ಗೋತ್ರಗಳ ನಡುವೆ ಫೆ.27ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9ರಿಂದ ಕ್ರಿಕೆಟ್ ಪಂದ್ಯಾವಳಿ, ಓಟದ ಸ್ಪರ್ಧೆ ಹಾಗೂ 28 ರಂದು ಗೌಳಿಬೀದಿ ಮೈದಾನದಲ್ಲಿ ಸಮುದಾಯದ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ ಮತ್ತಿತರರ ಮನೋರಂಜನಾ ಕ್ರೀಡೆಗಳು ನಡೆಯಲಿವೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಜಿ.ವಿ.ರವಿಕುಮಾರ್ ತಿಳಿಸಿದ್ದಾರೆ.
ಫೆ.28 ರಂದು ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು, ಕೊರೋನಾ ಸಂದರ್ಭ ಕೋರೋನಾ ವಾರಿಯರ್ಸ್ ಗಳಾಗಿ ದುಡಿದ 5 ಮಂದಿ ಸಮುದಾಯದ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಮತ್ತು ವೈವಾಹಿಕ ಜೀವನದಲ್ಲಿ 50 ವರ್ಷಗಳನ್ನು ಪೂರೈಸಿದ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಸುಮಾರು 450 ವರ್ಷಗಳ ಇತಿಹಾಸವಿರುವ ಗೌಳಿ ಸಮುದಾಯದವರು ಹೆಚ್ಚಾಗಿ ಜಿಲ್ಲಾ ಕೇಂದ್ರ ಮಡಿಕೇರಿಯ ಗೌಳಿ ಬೀದಿಯಲ್ಲಿ ನೆಲೆಸಿದ್ದಾರೆ. ಶ್ರೀ ಕಂಚಿ ಕಾಮಾಕ್ಷಿಯಮ್ಮ ಹಾಗೂ ಶ್ರೀ ಕೃಷ್ಣನನ್ನು ವಿಶೇಷವಾಗಿ ಆರಾಧಿಸುವ ಗೌಳಿ ಸಮುದಾಯದವರು ಜೊತೆಗೆ ಉಳಿದ ಮೂರು ಶಕ್ತಿ ದೇವತೆಗಳಾದ ಶ್ರೀ ಕುಂದುರುಮೊಟ್ಟೆ ಚೌಟ್ಟಿ ಮಾರಿಯಮ್ಮ, ಶ್ರೀ ಕೋಟೆ ಮಾರಿಯಮ್ಮ ಹಾಗೂ ಶ್ರೀ ದಂಡಿನ ಮಾರಿಯಮ್ಮ ದೇವಾಲಯಗಳಲ್ಲಿ ಗೌಳಿ ಸಮುದಾಯದವರೆ, ದಸರಾ ಕರಗ ಹಾಗೂ ಪೂಜಾ ವಿಧಿ ವಿಧಾನಗಳನ್ನು ಅನಾಧಿಕಾಲದಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ.
ಕೊಡಗಿನಲ್ಲಿ ರಾಜರ ಆಳ್ವಿಕೆ ಕಾಲದಿಂದಲೂ ಐತಿಹಾಸಿಕ ದಸರಾ ಉತ್ಸವ ಆರಂಭದಿಂದಲೂ, ಗೌಳಿ ಸಮುದಾಯದ ಪೂಜಾರಿ ಮನೆತನದವರು ನಾಲ್ಕು ಶಕ್ತಿ ದೇವತೆಗಳ ಕರಗಗಳನ್ನು ಹೋರುತ್ತಿದ್ದಾರೆ. ಈ ಸಮುದಾಯ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಮೂಲ ಆಚಾರ, ವಿಚಾರಗಳೊಂದಿಗೆ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದೆ ಎಂದು ರವಿಕುಮಾರ್ ತಿಳಿಸಿದ್ದಾರೆ.

error: Content is protected !!