ಮೇಕೇರಿ ರಸ್ತೆ ಬಂದ್ : ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ನವೀನ್ ಕುಶಾಲಪ್ಪ ಅಸಮಾಧಾನ

February 24, 2021

ಮಡಿಕೇರಿ ಫೆ.24 : ಮಡಿಕೇರಿಯಿಂದ ಮೇಕೇರಿವರೆಗಿನ ರಸ್ತೆಯಲ್ಲಿ ಫೆ.25 ರಿಂದ ಮಾ.25 ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿರುವುದು ಸರಿಯಾದ ಕ್ರಮವಲ್ಲವೆಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಪ್ರಧಾನ ಕಾರ್ಯದರ್ಶಿ ಅಂಬೆಕಲ್ಲು ನವೀನ್ ಕುಶಾಲಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಕ್ರಿಟ್ ರಸ್ತೆ ನಿರ್ಮಾಣದ ಕಾರಣ ನೀಡಿ ಮುಖ್ಯ ರಸ್ತೆಯನ್ನು ಒಂದು ತಿಂಗಳ ಕಾಲ ಬಂದ್ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಅವರು, ಕಾಂಕ್ರಿಟ್ ಹಾಕುವ ಬದಲು ಡಾಂಬರೀಕರಣ ಮಾಡಿ ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಮೊದಲ ಹಂತದ ಕಾಮಗಾರಿಯ ಸಂದರ್ಭ ಸುಮಾರು ಎರಡು ತಿಂಗಳ ಕಾಲ ಇದೇ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಇದೀಗ ಮುಂದುವರಿದ ಕಾಮಗಾರಿಗಾಗಿ ಮತ್ತೆ ಒಂದು ತಿಂಗಳ ಕಾಲ ರಸ್ತೆ ಬಂದ್ ಎಂದು ಹೇಳಲಾಗುತ್ತಿದೆ. ಆದರೆ 30 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಹೇಳಿಕೆ ಅನುಮಾನದಿಂದ ಕೂಡಿದೆ, ಅಲ್ಲದೆ ಕೇವಲ ಅರ್ಥ ಕಿ.ಮೀ ದೂರದ ರಸ್ತೆಯನ್ನು ಕಾಂಕ್ರೀಟಿಕರಗೊಳಿಸಲು ಒಂದು ತಿಂಗಳು ಬೇಕೆ ಎನ್ನುವ ಪ್ರಶ್ನೆ ಮೂಡುತ್ತಿದೆ. ನಿರಂತರವಾಗಿ ರಸ್ತೆ ಬಂದ್ ಮಾಡುವುದರಿಂದ ಈ ಭಾಗದ ವ್ಯಾಪಾರಸ್ಥರಿಗೆ, ನಿವಾಸಿಗಳಿಗೆ, ಖಾಸಗಿ ಬಸ್, ಆಟೋರಿಕ್ಷಾಗಳು ಮತ್ತು ಇತರ ವಾಹನಗಳಿಗೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ-ತಾಳತ್ತಮನೆ-ಮೇಕೇರಿ ಮಾರ್ಗವನ್ನು ಬಳಸುವಂತೆ ಜಿಲ್ಲಾಡಳಿತ ತಿಳಿಸಿದೆಯಾದರೂ ಹೆಚ್ಚುವರಿ ದೂರ ಸಾಗಬೇಕಾಗಿರುವುದರಿಂದ ಖಾಸಗಿ ಬಸ್‍ಗಳು ಮತ್ತು ಆಟೋರಿಕ್ಷಾಗಳು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಕೋವಿಡ್ ಸಂಕಷ್ಟದ ಪರಿಸ್ಥಿತಿಯಿಂದ ಈಗಷ್ಟೇ ಜಿಲ್ಲೆ ಹೊರ ಬಂದು ಪ್ರವಾಸೋದ್ಯಮ, ಬಸ್ ಗಳ ಸಂಚಾರ ಮತ್ತು ಇನ್ನಿತರ ವ್ಯಾಪಾರ, ವಹಿವಾಟು ಚೇತರಿಸಿಕೊಳ್ಳುತ್ತಿದೆ. ಈ ಹೊತ್ತಿನಲ್ಲೇ ಮುಖ್ಯ ರಸ್ತೆಯೊಂದನ್ನು 30- 40 ದಿನಗಳ ಕಾಲ ಬಂದ್ ಮಾಡಿ ಮತ್ತೆ ನಷ್ಟದ ಹಾದಿಗೆ ದೂಡಲಾಗುತ್ತಿದೆ ಎಂದು ನವೀನ್ ಕುಶಾಲಪ್ಪ ಆರೋಪಿಸಿದ್ದಾರೆ.
ಈ ಕಾಮಗಾರಿ ಮುಗಿದ ನಂತರ ಮತ್ತೆ ಮುಂದುವರಿದ ಕಾಮಗಾರಿ ಎಂದು ಉಳಿದ ರಸ್ತೆಯನ್ನು ಬಂದ್ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರು ಕಷ್ಟ, ನಷ್ಟಗಳನ್ನು ಅನುಭವಿಸುವುದರಿಂದ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಂಡು ಕಾಂಕ್ರಿಟ್ ರಸ್ತೆಯನ್ನು ಕೈಬಿಟ್ಟು ಡಾಂಬರೀಕರಣ ಕಾರ್ಯ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಪ್ರಸ್ತುತ ಕೈಗೊಂಡಿರುವ ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು, ಹಳೆಯ ರಸ್ತೆಯ ಕಲ್ಲುಗಳನ್ನು ವೈಜ್ಞಾನಿಕವಾಗಿ ತೆರವುಗೊಳಿಸಿ ಗುಣಮಟ್ಟದಿಂದ ಕಾಂಕ್ರಿಟೀಕರಣಗೊಳಿಸದೆ ಹೊಸ ಕಾಮಗಾರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಫೋಟೋ :: ನವೀನ್ ಕುಶಾಲಪ್ಪ

error: Content is protected !!