ಗ್ರಾಮ ಸಡಕ್ ಯೋಜನೆಯಿಂದ ಹೊದವಾಡ ಹೊರಕ್ಕೆ : ಗ್ರಾಮಸ್ಥರ ಅಸಮಾಧಾನ

February 24, 2021

ಮಡಿಕೇರಿ ಫೆ.24 : ಬಲಮುರಿ, ವಾಟೆಕಾಡು ಹೊದ್ದೂರು ರಸ್ತೆ ಅಭಿವೃದ್ಧಿಗಾಗಿ ಅನುದಾನ ಮಂಜೂರಾಗಿದ್ದು, ಈಗಾಗಲೇ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಆದರೆ ಯಾರದ್ದೋ ಪ್ರಭಾವಕ್ಕೆ ಮಣಿದಿರುವ ಸಂಬಂಧಿಸಿದ ಅಧಿಕಾರಿಗಳು ಯೋಜನೆಯಲ್ಲಿ ಸೇರಿರುವ ಹೊದವಾಡ ರಸ್ತೆಯನ್ನು ಡಾಂಬರೀಕರಣಗೊಳಿಸದೆ ನಿರ್ಲಕ್ಷಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಾಮಗಾರಿ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿದ್ದ ಗ್ರಾ.ಪಂ ಮಾಜಿ ಸದಸ್ಯ ಮುಹಮ್ಮದ್ ಶಾಫಿ ಪಿ.ಎ, ಅಬೂಬಕ್ಕರ್ ಬಿ.ಎಸ್, ಅಹ್ಮದ್ ಪಿ.ಯು, ಯೂಸುಫ್ ಹಾಜಿ ಕೆ.ಎ, ರಫೀಕ್ ಕೆ.ಯು, ಮಜೀದ್ ಪಳ್ಳಿಕ್ಕರೆ, ಮುಹಮ್ಮದ್ ಸಿನಾನ್ ಮತ್ತಿತರರು ಹೊದವಾಡ ರಸ್ತೆಯ ಕಡೆಗಣನೆಯನ್ನು ಖಂಡಿಸಿದರು.
ಹೊದ್ದೂರು ಗ್ರಾ.ಪಂ ಗೆ ಸೇರಿದ ಹೊದವಾಡ ಗ್ರಾಮಕ್ಕೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಬಲಮುರಿಯಿಂದ ಹೊದವಾಡ ಶಾಲೆಗಾಗಿ ಕಾಮಗಾರಿ ನಡೆಯಬೇಕಾಗಿತ್ತು. ಆದರೆ ಬಲಮುರಿಯಿಂದ ನೇರವಾಗಿ ವಾಟೆಕಾಡು ಹೊದ್ದೂರು ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ. ಹೊದವಾಡದಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನುವ ಕಾರಣಕ್ಕಾಗಿ ರಾಜಕೀಯ ದುರುದ್ದೇಶದಿಂದ ನಮ್ಮ ಗ್ರಾಮದ ರಸ್ತೆಯನ್ನು ಅಭಿವೃದ್ಧಿ ಪಡಿಸದೆ ಪಕ್ಕದ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಮುಹಮ್ಮದ್ ಶಾಫಿ ಆರೋಪಿಸಿದರು.
ಹೊದವಾಡ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಪ್ರತಿದಿನ ಸಂಚರಿಸುವ ಗ್ರಾಮಸ್ಥರು, ವಿದ್ಯಾರ್ಥಿಗಳು, ವಯೋವೃದ್ಧರಿಗೆ ತೊಂದರೆಯಾಗುತ್ತಿದೆ. ವಾಹನಗಳ ಸಂಚಾರ ಅಸಾಧ್ಯವಾಗಿದ್ದು, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಗ್ರಾಮದ ಎಲ್ಲಾ ಜನರು ಖಂಡಿಸುವುದಾಗಿ ಹೇಳಿದರು.
ಹೊದವಾಡ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಬಾರದು ಮತ್ತು ತಕ್ಷಣ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಅಹ್ಮದ್ ಪಿ.ಯು. ಒತ್ತಾಯಿಸಿದರು. ತಪ್ಪಿದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು, ಇದಕ್ಕೂ ಸ್ಪಂದನೆ ದೊರೆಯದಿದ್ದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

error: Content is protected !!