ಹುಲಿ ದಾಳಿ ತಡೆಯದಿದ್ದರೆ ಕೊಡಗು ಬಂದ್ : ರೈತ ಸಂಘ ಎಚ್ಚರಿಕೆ

February 24, 2021

ಮಡಿಕೇರಿ ಫೆ.24 : ದಕ್ಷಿಣ ಕೊಡಗಿನಲ್ಲಿ ಮಿತಿ ಮೀರಿರುವ ಹುಲಿ ದಾಳಿಯನ್ನು ನಿಯಂತ್ರಿಸದಿದ್ದಲ್ಲಿ “ಕೊಡಗು ಬಂದ್” ಗೆ ಕರೆ ನೀಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಎಚ್ಚರಿಕೆ ನೀಡಿದ್ದಾರೆ.
ಪೊನ್ನಂಪೇಟೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ಅಮಾಯಕ ಜೀವಗಳನ್ನು ಹುಲಿ ಬಲಿ ಪಡೆದಿದ್ದರೂ ಅರಣ್ಯ ಇಲಾಖೆಯ ಕಾರ್ಯಾಚರಣೆ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ನಿತ್ಯ ಹಸುಗಳು ಸಾವಿಗೀಡಾಗುತ್ತಿವೆ, ಜನ ಭಯಭೀತರಾಗಿದ್ದಾರೆ. ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂದು ಆರೋಪಿಸಿದರು.
ಅರಣ್ಯ ಅಧಿಕಾರಿಗಳು ಹುಲಿ ಸೆರೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ದಕ್ಷಿಣ ಕೊಡಗು ಭಾಗದಲ್ಲಿ 6 ರಿಂದ 7 ಹುಲಿಗಳು ಸಂಚರಿಸುತ್ತಿವೆ, ಸೆರೆ ಹಿಡಿಯಲು ಸಾಧ್ಯವಾಗದಿದ್ದಲ್ಲಿ ಗುಂಡು ಹೊಡೆಯಲಿ ಎಂದು ಒತ್ತಾಯಿಸಿದರು. ಹುಲಿ ಹಾವಳಿ ಕುರಿತು ಮುಂದಿನ ಒಂದು ವಾರದೊಳಗೆ ಅರಣ್ಯ ಸಚಿವರು ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ತಪ್ಪಿದಲ್ಲಿ ವಿವಿಧ ಸಂಘ, ಸಂಸ್ಥೆಗಳ ಸಹಕಾರ ಪಡೆದು “ಕೊಡಗು ಬಂದ್” ಗೆ ಕರೆ ನೀಡುವುದಾಗಿ ಹೇಳಿದರು.
ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಶಾಲೆಗೆ ಕರೆದೊಯ್ಯಲು ಅರಣ್ಯ ಇಲಾಖೆಯ ಅಧಿಕಾರಿಗಳು ವಾಹನದ ವ್ಯವಸ್ಥೆಯನ್ನು ಮಾಡಬೇಕು. ಹುಲಿ ದಾಳಿ ಸಂದರ್ಭ ಆತ್ಮ ರಕ್ಷಣೆಗಾಗಿ ತಮ್ಮ ಬಳಿ ಇರುವ ಕೋವಿಯನ್ನು ಪ್ರಯೋಗಿಸಲು ಜಿಲ್ಲೆಯ ರೈತರಿಗೆ ವಿಶೇಷ ಅನುಮತಿ ನೀಡಬೇಕು ಎಂದು ಮನುಸೋಮಯ್ಯ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ವಿರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್ ಹಾಗೂ ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲಂಡ ಸೂರಜ್ ಉಪಸ್ಥಿತರಿದ್ದರು.

error: Content is protected !!