ಗೋಣಿಕೊಪ್ಪದಲ್ಲಿ ಪ್ರಗತಿ ಸ್ಟಡಿ ಸೆಂಟರ್ ಆರಂಭ : ಪುಸ್ತಕಗಳ ಅಧ್ಯಯನಕ್ಕೆ ಸ್ವಾಮಿ ಬೋಧಸ್ವರೂಪನಂದಜೀ ಕರೆ

ಮಡಿಕೇರಿ ಫೆ.24 : ವಿದ್ಯಾರ್ಥಿಗಳಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಲು ಉತ್ತಮ ಪುಸ್ತಕಗಳ ಅಧ್ಯಯನದಿಂದ ಮಾತ್ರ ಸಾಧ್ಯವೆಂದು ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರಾದಾಶ್ರಮದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪನಂದಜೀ ಅಭಿಪ್ರಾಯಪಟ್ಟಿದ್ದಾರೆ.
ಗೋಣಿಕೊಪ್ಪದ ಪೂಜಾರಿ ಆರ್ಕೆಡ್ ಸಭಾಂಗಣದಲ್ಲಿ ಪ್ರಗತಿ ಸ್ಟಡಿ ಸೆಂಟರ್ ನ್ನು ಉದ್ಘಾಟಿಸಿ ಮಾತನಾಡಿದ ಅವರು ಕೀಳಿರಿಮೆ ತುಂಬಿದ ಮನಸ್ಸುಗಳಿಗೆ ವಿವೇಕಾನಂದರ ಬದುಕಿನ ಅರಿವು ಮತ್ತು ಆಧ್ಯಾತ್ಮಿಕ ಚಿಂತನೆಗಳಿಂದ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಬೇಕಾಗಿದೆ ಎಂದರು.
ಪ್ರತಿಯೊಬ್ಬರ ಆತ್ಮದಲ್ಲೂ ದೈವತ್ವದ ಪರಿಪೂರ್ಣತೆ ತುಂಬಿರುತ್ತದೆ. ಅಂತಹ ವ್ಯಕ್ತಿಗಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಳಿಸುವ ಮೂಲಕ ಉತ್ತಮ ವ್ಯಾಸಂಗಕ್ಕೆ ರೂಪುಗೊಳಿಸುವ ವ್ಯವಸ್ಥೆಯನ್ನು ಪ್ರಗತಿ ಸ್ಟಡಿ ಸೆಂಟರ್ ಮಾಡಿದೆ. ಕಳೆದ 13 ವರ್ಷಗಳಿಂದ ಯಶಸ್ಸನ್ನು ಸಾಧಿಸಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿನ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮಗೊಳಿಸುವ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ಉತ್ತಮ ಭವಿಷ್ಯ ರೂಪಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಸ್ವಾಮಿ ಬೋಧಸ್ವರೂಪನಂದಜೀ ತಿಳಿಸಿದರು.
ಪ್ರಗತಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಗೋಕುಲನಾಥ್ ಮಾತನಾಡಿ, ಓದಿನಲ್ಲಿ ಹಿಂದೆ ಉಳಿದಿರುವ ಮಕ್ಕಳಿಗೆ ಸ್ಫೂರ್ತಿಯನ್ನು ತುಂಬಿ ಉತ್ತಮ ಫಲಿತಾಂಶ ಬರುವಂತೆ ಮಾಡುವ ಗುರಿ ಮಾತ್ರ ಸಂಸ್ಥೆಯ ಮುಂದಿದೆ ಎಂದು ಸ್ಪಷ್ಟಪಡಿಸಿದರು.
ಪ್ರಗತಿ ಸ್ಟಡಿ ಸೆಂಟರ್ನ ಸಲಹೆಗಾರ ಇಟ್ಟೀರ ಕೆ.ಬಿದ್ದಪ್ಪ, ಎಂ.ಎಂ.ಕಮಲಾಕ್ಷಿ, ಜಯಲಕ್ಷ್ಮಿ ಜ್ಯುವೆಲ್ಲರಿ ಸಂಸ್ಥೆಯ ಮಾಲೀಕ ಎಂ.ಜಿ.ಮೋಹನ್ ಅವರುಗಳು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಮತ್ತು ಶೈಕ್ಷಣಿಕ ಪ್ರಗತಿಯ ಗುಟ್ಟನ್ನು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಹೇಮಲತಾ, ಪೂಜಾರಿ ಆರ್ಕೆಡ್ ಸಂಸ್ಥೆಯ ಮಾಲೀಕ ಪ್ರಕಾಶ್ ಪೂಜಾರಿ ಉಪಸ್ಥಿರಿದ್ದರು. ಇದೇ ಸಂದರ್ಭ ಸುಲಭ ಗಣಿತ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.